ಭ್ರಷ್ಟಾಚಾರ ಆರೋಪ; ಸಿಸಿಬಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ರೇಡ್..!

ಬೆಂಗಳೂರು: ಸಿಗರೇಟ್​ ವ್ಯಾಪಾರಿಗಳ ಸುಲಿಗೆ ಮಾಡಿದ ಆರೋಪದಡಿ ಅಮಾನತಾಗಿರೋ ಸಿಸಿಬಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಕೋಟಿ ಕೋಟಿ ಡೀಲ್​​ ಮಾಡಿದ್ದ ಆರೋಪ ಹೊತ್ತಿರುವ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ಪ್ರಭುಶಂಕರ್​​​, ಇನ್ಸ್​ಪೆಕ್ಟರ್​ಗಳಾದ ನಿರಂಜನ್​ ಹಾಗೂ ಅಜಯ್​ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಆದ್ರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಗದೇ ಎಸಿಪಿ ಪ್ರಭುಶಂಕರ್​​​ ಎಸ್ಕೇಪ್​​​ ಆಗಿದ್ದಾರೆ ಎನ್ನಲಾಗಿದೆ. ಸಹಕಾರ ನಗರದಲ್ಲಿರುವ ಪ್ರಭುಶಂಕರ್​​ ಮನೆ ಮೇಲೆ ರೇಡ್​​ಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು. ಬಳಿಕ ಪ್ರಭುಶಂಕರ್​​ ಪತ್ನಿಯನ್ನು ಕರೆಸಿ ಮನೆ ಬೀಗ ತೆಗೆಸಿದ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಪ್ರಭುಶಂಕರ್​​ ವಿರುದ್ಧ ಎಸಿಬಿ ತನಿಖಾಧಿಕಾರಿಗಳು ನಿನ್ನೆ 3 ಎಫ್​ಐಆರ್​​ ದಾಖಲಿಸಿದ್ದರು. ಇವತ್ತು ಡಿಎಸ್​ಪಿ ರಾಜೇಂದ್ರ ನೇತೃತ್ವದಲ್ಲಿ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಳ್ಳಂಬೆಳಗ್ಗೆ 7 ಕಡೆ ರೇಡ್ ಮಾಡಿರೋ ಎಸಿಬಿ ಅಧಿಕಾರಿಗಳ ತಂಡ, ಬ್ರೋಕರ್​ಗಳ ಮನೆ ಮೇಲೂ ಎಸಿಬಿ ಟೀಮ್ ರೇಡ್ ಮಾಡಿದೆ. ಎಸಿಪಿ ಪ್ರಭುಶಂಕರ್​​​ ಬಗ್ಗೆ ಮಾಹಿತಿ ಸಿಕ್ಕರೆ ಎಸಿಬಿಗೆ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ತಿಳಿಸುವಂತೆ ಕೋರಲಾಗಿದೆ.

ಕಳೆದ 2 ತಿಂಗಳಿಂದ ಜನ ಲಾಕ್​​ಡೌನ್​ ಸಂಕಷ್ಟದಲ್ಲಿದ್ರೆ, ಸಿಸಿಬಿಯ ಈ ಮೂವರು ಅಧಿಕಾರಿಗಳು ಕೋಟಿ ಕೋಟಿ ಡೀಲ್​ ನಡೆಸಿದ್ದರು. ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡಿ ಲಂಚ ಪಡೆದಿದ್ದರು ಎನ್ನಲಾಗಿದೆ. ಡೀಲ್​ ವ್ಯವಹಾರ ಬಯಲಿಗೆ ಬರುತ್ತಿದ್ದಂತೆ ಮೂವರು ಸಿಸಿಬಿ ಅಧಿಕಾರಿಗಳನ್ನ ಅಮಾನತು ಮಾಡಲಾಗಿತ್ತು. ಬಳಿಕ ಪ್ರಕರಣವನ್ನು ತನಿಖೆಗಾಗಿ ಎಸಿಬಿಗೆ ವರ್ಗಾಯಿಸಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!