Monday, January 25, 2021
Home ಅಂತರ್ ರಾಷ್ಟ್ರೀಯ 25 ವರ್ಷಗಳ ಹಿಂದೆ ವಶಕ್ಕೆ ಪಡೆದ ಪಂಚೇನ್ ಲಾಮಾ ಎಲ್ಲಿದ್ದಾರೆ? ಚೀನಾಗೆ ಅಮೆರಿಕ ಪ್ರಶ್ನೆ

ಇದೀಗ ಬಂದ ಸುದ್ದಿ

25 ವರ್ಷಗಳ ಹಿಂದೆ ವಶಕ್ಕೆ ಪಡೆದ ಪಂಚೇನ್ ಲಾಮಾ ಎಲ್ಲಿದ್ದಾರೆ? ಚೀನಾಗೆ ಅಮೆರಿಕ ಪ್ರಶ್ನೆ

ನವದೆಹಲಿ: ಭಾರತವೂ ಸೇರಿ ಜಗತ್ತಿನ ವಿವಿಧೆಡೆಗಳಲ್ಲಿರುವ ಟಿಬೆಟಿಯನ್ನರು ಈಗಲೂ ತಮ್ಮದು ‘ಸ್ವತಂತ್ರ ಟಿಬೆಟ್​’ ಎಂದೇ ಘೋಷಿಸಿಕೊಳ್ಳುತ್ತಾರೆ. ‘ಪರಾಧೀನದ ಅಥವಾ ಗಡಿಪಾರಾದ ಸರ್ಕಾರ’ ಎಂದೇ ಕರೆದುಕೊಳ್ಳುತ್ತಾರೆ.

ಶತಮಾನಗಳವರೆಗೆ ಸ್ವತಂತ್ರವಾಗಿದ್ದ ಟಿಬೆಟ್​ ಈಗ ಚೀನಾದ ಭಾಗವಾಗಿದೆ. ಆರಂಭದಲ್ಲಿ ಟಿಬೆಟ್​ನ ಸ್ವಾಯತ್ತೆಯನ್ನು ಮನ್ನಿಸಿದ್ದ ಚೀನಾ, ಬಳಿಕ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು. ಇದಕ್ಕಾಗಿಯೇ 25 ವರ್ಷಗಳ ಹಿಂದೆ 11ನೇ ಪಂಚೇನ್​ ಲಾಮಾನ ಅವತಾರವೆಂದು ಘೋಷಿಸಿದ್ದ ಆರು ವರ್ಷದ ಬಾಲಕನನ್ನು ವಶಕ್ಕೆ ಪಡೆಯಿತು. ಆ ಮೂಲಕ ಜಗತ್ತಿನ ಅತ್ಯಂತ ಕಿರಿಯ ರಾಜಕೀಯ ಕೈದಿ ಎಂಬ ಹಣೆಪಟ್ಟಿ ಪಂಚೇನ್​ ಲಾಮಾದ್ದಾಯಿತು.

ಕೊರೊನಾ ಕಾರಣಕ್ಕಾಗಿ ಚೀನಾ ವಿರುದ್ಧ ನಿತ್ಯವೂ ಹರಿಹಾಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, 11ನೇ ಪಂಚೇನ್​ ಲಾಮಾ ಎಲ್ಲಿದ್ದಾರೆ? ಎಂದು ಚೀನಾವನ್ನು ಇತ್ತೀಚೆಗೆ ಪ್ರಶ್ನಿಸಿದ್ದರು. ಇದೀಗ ಅದಕ್ಕೆ ಉತ್ತರ ದೊರೆತಿದೆ.

ಆಗ, ಆರು ವರ್ಷದವನಾಗಿದ್ದ ಬಾಲಕ ಗೇಧುನ್​ ಚೊಯ್ಕಿ ನೀಮಾ ಈಗ ಪದವೀಧರ ಹಾಗೂ ಸುಭದ್ರವಾದ ಉದ್ಯೋಗವನ್ನು ಹೊಂದಿದ್ದಾನೆ ಎಂದು ಚೀನಾ ಹೇಳಿದೆ. ನೀಮಾ ಆಗಲಿ, ಆತನ ಕುಟುಂಬವಾಗಲಿ ಸಾಮಾನ್ಯ ಬದುಕು ಸಾಗಿಸುವುದಕ್ಕೆ ಯಾವುದೇ ಅಡ್ಡಿಯಾಗುವುದನ್ನು ಇಷ್ಟಪಡುವುದಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​ ಹೇಳಿದ್ದಾರೆ.

ಆದರೆ ಆತನ ಭಾವಚಿತ್ರವನ್ನಾಗಲಿ, ಎಲ್ಲಿದ್ದಾನೆ ಎಂಬ ವಿವರವನ್ನು ಚೀನಾ ಬಿಡುಗಡೆ ಮಾಡಿಲ್ಲ. ಕಳೆದ ವರ್ಷ ಬಿಬಿಸಿ ವಾಹಿನಿ ಪ್ರಸಾರ ಮಾಡಿದ್ದ ಆತನ ಕಾಲ್ಪನಿಕ ಚಿತ್ರವೇ ಇಂದಿಗೂ ಹರಿದಾಡುತ್ತಿದೆ.

ಟಿಬೇಟಿಯನ್​ ಧರ್ಮಗುರು ದಲೈ ಲಾಮಾ ಅವರಿಂದ 1995ರಲ್ಲಿ 11ನೇ ಪಂಚೇನ್​​ ಲಾಮಾ ಆಗಿ ಗುರುತಿಸಲ್ಪಟ್ಟಿದ್ದ ನೀಮಾ ಆಯ್ಕೆಯನ್ನು ತಿರಸ್ಕರಿಸಿದ್ದ ಚೀನಾ, ಗ್ಯಾನ್​ಸೇನ್​ ನೊರ್ಬು ಎಂಬುವರನ್ನು ಆ ಪದವಿಗೆ ಆಯ್ಕೆ ಮಾಡಿತ್ತು.

ಪಂಚೇನ್​ ಲಾಮಾ ಬಗ್ಗೆ ಚೀನಾ ಮಾಹಿತಿ ನೀಡುತ್ತಿದ್ದಂತೆ, ಆತನನ್ನು ಬಿಡುಗಡೆ ಮಾಡಬೇಕು. ಹೇಗಿದ್ದಾನೆ ಎಂಬುದನ್ನು ಜಗತ್ತಿಗೆ ತಿಳಿಸಬೇಕೆಂದು ಅಮೆರಿಕ ಒತ್ತಾಯಿಸಿದೆ. ಇನ್ನೊಂದೆಡೆ, ಅಧಿಕಾರವಿಲ್ಲದಿದ್ದರೂ, ದಲೈ ಲಾಮಾ ಉತ್ತರಾಧಿಕಾರಿಯನ್ನು ನೇಮಿಸಲು ಚೀನಾ ಉತ್ಸುಕವಾಗಿದೆ ಎಂದು ಅಮೆರಿಕ ಆರೋಪಿಸಿದೆ.

 

TRENDING