ವಲಸೆ ಕಾರ್ಮಿಕರು ಗಾಳಿಸುದ್ದಿಗೆ ಕಿವಿಗೊಟ್ಟು ರಾಜ್ಯ ತೊರೆಯಬಾರದು :ಸಿಎಂ ಬಿಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೆಂಪುವಲಯ ಹೊರತುಪಡಿಸಿ ಇತರ ಕಡೆ ಆರಂಭಿಸಲಿದ್ದು, ವಲಸೆ ಕಾರ್ಮಿಕರು ಗಾಳಿಸುದ್ದಿಗೆ‌ ಕಿವಿಗೊಟ್ಟು ರಾಜ್ಯ ತೊರೆಯಬಾರದು. ಎಲ್ಲರಿಗೂ ಉದ್ಯೋಗ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಇಂದು ಬಿಲ್ಡರ್ ಜೊತೆ ಸಭೆ ನಡೆಸಲಾಗಿದೆ, ವಲಸೆ ಕಾರ್ಮಿಕರ ಸಮಸ್ಯೆ ಕುರಿತು ಒಂದು ಗಂಟೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಕೊರೊನಾ ಇತರ ರಾಜ್ಯಕ್ಕೆ‌ ಹೋಲಿಸಿದರೆ ಹತೋಟಿಯಲ್ಲಿದೆ. ಕೆಂಪು ವಲಯ ಹೊರತುಪಡಿಸಿ ವ್ಯಾಪಾರ, ಕೈಗಾರಿಕಾ‌ ಚಟುವಟಿಕೆ ಆರಂಭಿಸಬೇಕಿದೆ” ಎಂದು ಕರೆ ನೀಡಿದರು.

ಇದರ ಜೊತೆಗೆ ”ಕಾರ್ಮಿಕರ ಅನಗತ್ಯ ಪ್ರಯಾಣ ನಿಯಂತ್ರಿಸಬೇಕಿದೆ. ಬಿಲ್ಡರ್‌ಗಳು ಸಾವಿರಾರು ಜನರಿಗೆ ಉದ್ಯೋಗ‌ ಸೇರಿ ಎಲ್ಲಾ ಅನುಕೂಲ ಮಾಡಿದ್ದೇವೆ. ಲಾಕ್​​​ಡೌನ್ ವೇಳೆಯಲ್ಲೂ ವೇತನ, ಊಟ ವ್ಯವಸ್ಥೆ ಮಾಡಿದ್ದು ಕೆಲಸ ಆರಂಭಿಸಲಾಗುತ್ತದೆ ಎಂದಿದ್ದಾರೆ. ಯಾರೂ ಗಾಳಿ ಸುದ್ದಿಗೆ ಕಿವಿಗೊಡಬೇಡಿ, ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಿರೋ ಅಲ್ಲಿ‌ಯೇ ಇರಿ. ನಿಮಗೆ ಏನೇ ತೊಂದರೆ ಇದ್ದರೂ ಪರಿಹರಿಸುತ್ತೇವೆ” ಎಂದರು. ನೇಕಾರರ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ ಸಿಎಂ, ಇಂದು ಸಂಜೆಯೊಳಗೆ ರಾಜ್ಯದ ಆರ್ಥಿಕ ಸ್ಥಿತಿಯ ಇತಿಮಿತಿಯಲ್ಲಿ ರೈತರು ಮತ್ತು ನೇಕಾರರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗುತ್ತದೆ ಎಂದು ಭರವಸೆ ನೀಡಿದರು.

 

Share Post

Leave a Reply

Your email address will not be published. Required fields are marked *

error: Content is protected !!