ಬೆಂಗಳೂರು: ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ವಿಧಾನಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆದಿರುವ ಸರ್ವಪಕ್ಷ ಸಭೆ ಆರಂಭವಾಗಿದೆ.
ವಿಧಾನಸೌಧದಲ್ಲಿ ಸಭೆ ಕರೆದಿರುವ ಬಿಎಸ್ ಯಡಿಯೂರಪ್ಪ ಇದಕ್ಕೂ ಮೊದಲು ಮಾತನಾಡಿದರು. ಕೋವಿಡ್ 19 ನಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮಾರ್ಚ್ 13 ರಿಂದ ನಿರಂತರ ಸಭೆಗಳನ್ನು ನಡೆಸಿ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ. ಕೊರೊನಾ ತಡೆ ನಿಟ್ಟಿನಲ್ಲಿ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಜನ ಜೀವನಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಸರ್ವ ಪಕ್ಷ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಸಲೀಂ ಅಹಮದ್, ಎಚ್. ಡಿ ರೇವಣ್ಣ, ಬಿ.ಕೆ ಹರಿಪ್ರಸಾದ್, ಬಸವರಾಜ ಹೊರಟ್ಟಿ ಮುಂತಾದ ನಾಯಕರು ಆಗಮಿಸಿ ಚರ್ಚೆ ನಡೆಸುತ್ತಿದ್ದಾರೆ.