ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತ ನಿಗದಿತ ಸಮಯಕ್ಕಿಂತ ಮೊದಲು ಜಯ ಸಾಧಿಸಲಿದೆ: ಚೀನಾ ಅಭಿಪ್ರಾಯ

ಕೋವಿಡ್ 19 ಮಾರಣಾಂತಿಕ ವೈರಸ್ ಗೆ ಜಗತ್ತು ತತ್ತರಿಸಿ ಹೋಗಿರುವ ಬೆನ್ನಲ್ಲೇ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾರತದ ಜನ ಅತೀ ಶೀಘ್ರವಾಗಿ ಗೆಲುವು ಕಾಣಲಿದ್ದಾರೆ ಎಂಬ ವಿಶ್ವಾಸ ಇದ್ದಿರುವುದಾಗಿ ಚೀನಾ ಅಭಿಪ್ರಾಯವ್ಯಕ್ತಪಡಿಸಿದೆ.

ಕೋವಿಡ್ 19 ಮಹಾಮಾರಿ ವಿರುದ್ಧ ಇದೀಗ ಚೀನಾ ಕೂಡಾ ಭಾರತ ಸೇರಿದಂತೆ ಇತರ ದೇಶಗಳ ಜತೆಗೂಡಿ ಹೋರಾಟವನ್ನು ಮುಂದುವರಿಸಲಿದೆ. ಅಲ್ಲದೇ ಜಿ20 ಮತ್ತು ಬ್ರಿಕ್ಸ್ (ಬಿಆರ್ ಐಸಿಎಸ್) ಸೇರಿದಂತೆ ವಿವಿಧ ಫ್ಲ್ಯಾಟ್ ಫಾರಂಗಳ ಮೂಲಕ ಸಹಕಾರ ಪಡೆಯಬೇಕಾಗಿದೆ. ಜಾಗತಿಕವಾಗಿ ಆತಂಕ ತಂದೊಡ್ಡಿರುವ ಕೋವಿಡ್ 19 ವಿರುದ್ಧ ಇನ್ನಷ್ಟು ಉತ್ತಮವಾಗಿ ಹೋರಾಡುವ ಮೂಲಕ ಕೊಡುಗೆ ನೀಡಬೇಕಾಗಿದೆ ಎಂದು ಭಾರತದಲ್ಲಿರುವ ಚೀನಾದ ರಾಯಭಾರಿ ಜಿ ರೋಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾರತ ನೀಡಿರುವ ಸಹಕಾರಕ್ಕೆ ಚೀನಾ ಅಭಿನಂದನೆ ಸಲ್ಲಿಸಿದೆ. ಅಲ್ಲದೇ ಇದೀಗ ಕೋವಿಡ್ 19 ಸೋಂಕಿಗೆ ಗುರಿಯಾಗಿರುವ ಭಾರತಕ್ಕೂ ನೆರವು ನೀಡುವುದಾಗಿ ತಿಳಿಸಿದೆ.

ಮಾರಣಾಂತಿಕ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಭಾರತಕ್ಕೆ ಚೀನಾ ಉದ್ಯಮಿಗಳು ದೇಣಿಗೆ ನೀಡಲು ಆರಂಭಿಸಿರುವುದಾಗಿ ಜಿ ರೋಂಗ್ ತಿಳಿಸಿದ್ದಾರೆ. ಅಲ್ಲದೇ ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡಲು ಚೀನಾ ಸಿದ್ದವಾಗಿದೆ ಎಂದು ಭರವಸೆ ನೀಡಿದ್ದಾರೆ.

ಚೀನಾದಲ್ಲಿ ಕೋವಿಡ್ 19 ಸೋಂಕಿಗೆ 3,200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 81ಸಾವಿರಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದರು. ಈ ಸಂದರ್ಭದಲ್ಲಿ ಭಾರತ ಚೀನಾಕ್ಕೆ ಸುಮಾರು 15 ಟನ್ ಗಳಷ್ಟು ಮಾಸ್ಕ್, ಗ್ಲೌಸ್ ಸೇರಿದಂತೆ ವೈದ್ಯಕೀಯ ನೆರವು ನೀಡಿತ್ತು.

 

Share Post

Leave a Reply

Your email address will not be published. Required fields are marked *

error: Content is protected !!