ದಶಕಗಳಿಂದ ಮಾನವ ಇತಿಹಾಸದ ಪುಟಗಳಲ್ಲಿ ದಾಖಲಾದ ಭಯಂಕರ 10 ಕಾಯಿಲೆಗಳು

ಕೊರೊನಾದ ಭೀಕರತೆಯು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ ಎಂಬುದು ನಿಧಾನಕ್ಕಾದರೂ ನಮ್ಮ ಜನಕ್ಕೆ ಅರ್ಥವಾಗಬೇಕು. ಮಾನವ ಇತಿಹಾಸದ ಪುಟಗಳಲ್ಲಿ ದಾಖಲಾದ ಭಯಂಕರ ಕಾಯಿಲೆಗಳು ಹೇಗೆ ಕೋಟ್ಯಂತರ ಜನರನ್ನು ಮಣ್ಣಿನಡಿ ಮಲಗಿಸಿವೆ ಎಂಬುದು ತಿಳಿದರೆ ಬಹುಶಃ ಈಗಿನ ಸನ್ನಿವೇಶ ಮತ್ತೂ ವಿಭಿನ್ನವಾಗುತ್ತದೆ. ಈ ದಿನ ಅಂಥದ್ದೊಂದು ಲೇಖನ ನಿಮ್ಮೆದುರು ಇದೆ. ದಶಕಗಳು- ಶತಮಾನಗಳ ಹಿಂದೆ ಯಾವ ಕಾಯಿಲೆ ಎಂಥ ಆತಂಕ ಸೃಷ್ಟಿ ಮಾಡಿತ್ತು ಎಂದು ಅವಲೋಕಿಸಿದರೆ ಕಣ್ಣೆದುರು ನಿಲ್ಲುವ ಹೆಸರು ‘ಬ್ಲ್ಯಾಕ್ ಡೆತ್’. 1346ರಿಂದ 1353ನೇ ಇಸವಿ ಮಧ್ಯೆ ಯುರೋಪ್ ನಾದ್ಯಂತ ಕಾಣಿಸಿಕೊಂಡ ಈ ಕಾಯಿಲೆಗೆ ಕೋಟ್ಯಂತರ ಜನ ಮಣ್ಣಾಗಿ ಹೋದರು. ಈಗಲೂ ಇತಿಹಾಸದಲ್ಲೇ ಅತಿ ಹೆಚ್ಚು ಬಲಿ ಪಡೆದ ಕಾಯಿಲೆ ಎಂಬ ‘ಕುಖ್ಯಾತಿ’ ಇರುವುದು ಅದಕ್ಕೇ.

21 ದಿನ ಭಾರತವನ್ನು ಲಾಕ್ ಡೌನ್ ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದರೆ ಅದಕ್ಕೆ ವಿರುದ್ಧವಾಗಿ ಧ್ವನಿ ಏಳುತ್ತಿವೆ. ನೆನಪಿರಲಿ, ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗವಾಗಿ ಹರಡಿ, ದೊಡ್ಡ ಮಟ್ಟದ ಆತಂಕ ಸೃಷ್ಟಿಸುತ್ತಿರುವ ಕೊರೊನಾಗೆ ಇತಿಹಾಸದಲ್ಲಿ ಭೀಕರ ಕಾಯಿಲೆಯಾಗಿ ಒಂದು ಸ್ಥಾನ ಸಿಕ್ಕೇ ಸಿಗುತ್ತದೆ. ಈ ಹಿಂದೆ ಇತಿಹಾಸದಲ್ಲಿ ದಾಖಲಾಗಿ ಉಳಿದ ಅಂಥ ಭೀಕರ ಕಾಯಿಲೆಗಳು ಮತ್ತು ಅವು ಪಡೆದ ಬಲಿಗಳ ವಿವರ ಇಂತಿದೆ.

ಆರನೇ ಕಾಲರಾ (1910-11) ಆರನೇ ಕಾಲರಾ ಮೊದಲಿಗೆ ಕಾಣಿಸಿಕೊಂಡಿದ್ದು ಭಾರತದಲ್ಲಿ. ಅದರ ಹಿಂದೆಯೇ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ರಷ್ಯಾಗಳಿಗೂ ವ್ಯಾಪಿಸಿತು. ಈ ಭಯಾನಕ ಕಾಯಿಲೆ ಹೊಡೆತಕ್ಕೆ 8 ಲಕ್ಷ ಮಂದಿ ಬಲಿಯಾದರು.
ಮೂರನೇ ಕಾಲರಾ (1852) ಮೂರನೇ ಕಾಲರಾ ಕೂಡ ಮೊದಲಿಗೆ ಕಾಣಿಸಿಕೊಂಡಿದ್ದು ಭಾರತದಲ್ಲೇ. ಇಲ್ಲಿಂದ ವಿವಿಧ ಖಂಡಗಳಿಗೆ ಹಬ್ಬಿತು. ಇದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟರು. 19ನೇ ಶತಮಾನದ ಅತ್ಯಂತ ಭೀಕರ ಕಾಯಿಲೆ ಎಂಬ ಕುಖ್ಯಾತಿ ಇದರದು. ಏಕೆಂದರೆ ಇದಕ್ಕೆ ಬಲಿಯಾದವರ ಸಂಖ್ಯೆ ಅಷ್ಟಿತ್ತು.


ಹಾಂಕಾಂಗ್ ಫ್ಲೂ (1968) 1968ರಲ್ಲಿ ಕಾಣಿಸಿಕೊಂಡ ಇನ್ ಫ್ಲುಯೆಂಜಾ ವೈರಸ್ ಮೂಲತಃ ಏಷ್ಯಾ ಖಂಡದಿಂದಲೇ ಉಗಮವಾಗಿದ್ದು, ಈ ವೈರಾಣುವಿಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾದರು. ಇದನ್ನು ಪ್ಯಾಂಡೆಮಿಕ್ ಎಂದು ಗುರುತಿಸಲಾಯಿತು. H3N2 ಉಪ ಬಗೆಯ ವೈರಾಣು ಇದರ ಮೂಲ ಎಂದು ಶಂಕಿಸಲಾಯಿತು. ಅದಕ್ಕೂ ಮುನ್ನ 1957ರಲ್ಲಿ ಆದ ಇನ್ ಫ್ಲುಯೆಂಜಾದ ಮರುಕಳಿಸಿದೆ ಇದು ತಿಳಿಯಲಾಯಿತು.

ಫ್ಲೂ (1889-90) ಇದು ಇನ್ ಫ್ಲುಯೆಂಜಾ ವೈರಸ್, H3N8ನ ಉಪ ಬಗೆ. ರಷ್ಯನ್ ಸಾಮ್ರಾಜ್ಯದಲ್ಲಿ ಉದ್ಭವಿಸಿದ ಇದು, ಉತ್ತರಧ್ರುವದಾದ್ಯಂತ ಹಬ್ಬಿತು. ಆಧುನಿಕ ಸಾರಿಗೆ ವ್ಯವಸ್ಥೆಯು ಈ ಕಾಯಿಲೆ ಹರಡುವುದಕ್ಕೆ ಮುಖ್ಯ ಕಾರಣವಾಯಿತು. ಈ ಕಾಯಿಲೆಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.

ಏಷ್ಯನ್ ಫ್ಲೂ (1957) ಇದು ಏವಿಯನ್ ಇನ್ ಫ್ಲುಯೆಂಜಾದಿಂದ ಉದ್ಭವ ಆಯಿತು. ಆ ನಂತರ ಇದಕ್ಕೆ ಔಷಧ ಕಂಡುಹಿಡಿಯಲಾಯಿತು. ಆದರೆ ಈ ವೈರಾಣು ವಿಪರೀತ ಹೆಚ್ಚಾಗಿದ್ದಾಗ ಇಪ್ಪತ್ತು ಲಕ್ಷ ಜನರನ್ನು ಕೊಂದಿತು.

ಅಂಟೋನಿನೆ ಪ್ಲೇಗ್ (ಕ್ರಿಸ್ತಶಕ 165) ಅಂಟೋನಿನೆ ಪ್ಲೇಗ್ ಅಥವಾ ಪ್ಲೇಗ್ ಆಫ್ ಗೇಲನ್ ಎಂದು ಕರೆಯಲಾಗುತ್ತದೆ. ರೋಮನ್ ಸಾಮ್ರಾಜ್ಯದಲ್ಲಿ ಕಾಣಿಸಿಕೊಂಡ ಇದು ಬಲಿ ಪಡೆದದ್ದು 50 ಲಕ್ಷ ಮಂದಿಯನ್ನು. ಇದು ಸಿಡುಬು ಅಥವಾ ರೋಮ್ ಗೆ ಹಿಂತಿರುಗಿದ ಸೈನಿಕರು ಹೊತ್ತು ತಂದ ದಡಾರ ಇದ್ದಿರಬಹುದು ಎಂಬ ಗುಮಾನಿಯೂ ಇದೆ.

ಪ್ಲೇಗ್ ಆಫ್ ಜಸ್ಟಿನಿಯನ್ (541-542) ಬೈಜಂಟೈನ್ ಸಾಮ್ರಾಜ್ಯ ಮತ್ತು ಮೆಟರೇನಿಯನ್ ಸಮುದ್ರದ ಸುತ್ತಮುತ್ತ ಕಾಣಿಸಿಕೊಂಡ ಈ ಪ್ಲೇಗ್ ಮಾರಿಗೆ ಬಲಿಯಾದದ್ದು 2.50 ಕೋಟಿ ಮಂದಿ (ಅವತ್ತಿನ ಲೆಕ್ಕಕ್ಕೆ ಯುರೋಪ್ ಒಟ್ಟು ಜನಸಂಖ್ಯೆಯ ಅರ್ಧದಷ್ಟು). ಬಂದರುಗಳಿಗೆ ಬರುತ್ತಿದ್ದ ಸ್ವಚ್ಛತೆ ಕಾಪಾಡಿಕೊಳ್ಳದ ಹಡಗುಗಳಿಂದ ಇದು ಭಾರೀ ವೇಗವಾಗಿ ಹರಡಿತು.

ಎಚ್ ಐವಿ/ಏಡ್ಸ್ (2005- 2012) ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ವ್ಯಕ್ತಿಯ ಕುಟುಂಬದಲ್ಲೇ ಕಾಣಿಸಿಕೊಂಡಿದ್ದ ಕಾಯಿಲೆ ಇದು. ಈ ಏಡ್ಸ್ ಅನ್ನು ಮೊದಲಿಗೆ ಗುರುತಿಸಿದ್ದು 1976ರಲ್ಲಿ, ರಿಪಬ್ಲಿಕ್ ಆಫ್ ಕಾಂಗೋದಲ್ಲಿ. ಆದರೆ 2005- 2012ರ ಮಧ್ಯೆ ಆಫ್ರಿಕಾ ಖಂಡದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತು. ಲೈಂಗಿಕ ಸಂಪರ್ಕದ ಮೂಲಕ ಹಬ್ಬುವ ವೈರಾಣುವಿಗೆ 3.5 ಕೋಟಿಗೂ ಹೆಚ್ಚು ಮಂದಿ ಮೃತಪಟ್ಟರು.


ಸ್ಪ್ಯಾನಿಷ್ ಫ್ಲೂ (1918) ಅತ್ಯಂತ ಮಾರಣಾಂತಿಕ ಕಾಯಿಲೆ ಇದು. ಇದರ ಸೋಂಕಿಗೆ ಒಳಗಾದವರ ಸಂಖ್ಯೆ 50 ಕೋಟಿಗೆ ಹೆಚ್ಚು. ಇದಕ್ಕೆ ಮೃತಪಟ್ಟವರ ಸಂಖ್ಯೆ 5 ಕೋಟಿ. H1N1 ವೈರಾಣು ಸೃಷ್ಟಿಸಿದ ಅನಾಹುತ ಇದು. ತುಂಬಿ ತುಳುಕುತ್ತಿದ್ದ ಆಸ್ಪತ್ರೆಗಳು, ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದದ್ದು ಈ ಕಾಯಿಲೆಗೆ ಬಲಿಯಾದವರ ಸಂಖ್ಯೆಯನ್ನು ಹೆಚ್ಚುವಂತೆ ಮಾಡಿತು.


ದ ಬ್ಲ್ಯಾಕ್ ಡೆತ್ (1346-1353) ಪ್ಲೇಗ್ ಕಾಯಿಲೆಯನ್ನೇ ‘ದ ಬ್ಲ್ಯಾಕ್ ಡೆತ್’ ಎಂದು ಕರೆಯಲಾಗಿದೆ. ದ ಬ್ಲ್ಯಾಕ್ ಡೆತ್ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ಕಾಯಿಲೆ. 20 ಕೋಟಿಗೂ ಹೆಚ್ಚು ಮಂದಿಯನ್ನು ಬಲಿ ಪಡೆದ ಕಾಯಿಲೆ. ಇತಿಹಾಸ ತಜ್ಞರ ಪ್ರಕಾರ, ಈ ಕಾಯಿಲೆಯ ಮೂಲ ಏಷ್ಯಾ ಖಂಡ. ಹಡಗುಗಳಲ್ಲಿ ಇದ್ದ ಕಪ್ಪು ಇಲಿಗಳ ಮೂಲಕ ವಿಶ್ವದಾದ್ಯಂತ ಹಬ್ಬಿತು.

Share Post

Leave a Reply

Your email address will not be published. Required fields are marked *

error: Content is protected !!