“ತರಕಾರಿ ಬೆಲೆಗಳು ಸಿಕ್ಕಾಪಟ್ಟೆ ದುಬಾರಿ; ದಿನಬಳಕೆ ವಸ್ತುಗಳೇ ಸಿಗಿಲ್ಲ” ಆತಂಕಗೊಂಡಿರುವ ಜನರು

ಬೆಂಗಳೂರು, ಮಾರ್ಚ್ 25: “ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮುಗಿಬೀಳುವ ಅಗತ್ಯ ಇಲ್ಲ. ಎಲ್ಲವೂ ಸಿಗುತ್ತದೆ” ಎಂದು ಸರ್ಕಾರದಿಂದ ನಿರಂತರವಾಗಿ ಅಭಯ ನೀಡಲಾಗುತ್ತಿದೆ. ಕೊರೊನಾ ಭೀತಿ ಹೆಚ್ಚಾದ ದಿನದಿಂದ ಜನರು ಆತಂಕಗೊಂಡಿದ್ದರು. ಇನ್ನು ಕಳೆದ ಕೆಲ ದಿನದಿಂದ ಜನರು ಸರ್ಕಾರದ ಮಾತನ್ನು ಕೇಳದೆ, ಅಗತ್ಯ ದಿನಸಿ ಮತ್ತಿತರ ವಸ್ತುಗಳ ಶೇಖರಣೆ ಆರಂಭಿಸಿದ್ದರು. ಈಗ ಅಂಥ ಜನರ ಲೆಕ್ಕಾಚಾರವೇ ಸರಿಯಿದೆ ಎಂಬಂತೆ ಆಗಿದೆ.

ಬೆಂಗಳೂರಿನಲ್ಲಿ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳ ಆಗಿದೆ. ಇಪ್ಪತ್ತು- ಮೂವತ್ತು ರುಪಾಯಿಗೆ ಒಂದು ಕೇಜಿ ಸಿಗುತ್ತಿದ್ದ ಹುರುಳಿಕಾಯಿಗೆ ಈಗ 80 ರುಪಾಯಿ. ಟೊಮೆಟೋ, ಈರುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಕರಿಬೇವು- ಕೊತ್ತಂಬರಿ ಹೀಗೆ ಎಲ್ಲದರ ದರವೂ ಸಿಕ್ಕಾಪಟ್ಟೆ ಹೆಚ್ಚಾಗಿದೆ.

“ಮೊದಲಿಗೆ ತರಕಾರಿಗಳ ಬೆಲೆ ಕಡಿಮೆ ಇತ್ತು. ಆದರೆ ಕ್ರಮೇಣ ತುಂಬಾ ಜಾಸ್ತಿ ಆಗುತ್ತಿದೆ. ಬೇರೆ ತರಕಾರಿಗಳಿರಲಿ, ಟೊಮೆಟೋ ಒಂದು ಕೇಜಿಗೆ ನಲವತ್ತು ರುಪಾಯಿಗಿಂತ ಕಡಿಮೆಗೆ ಸಿಗುತ್ತಿಲ್ಲ. ಸರಿ, ಒಳ್ಳೆ ತರಕಾರಿ ಸಿಗುತ್ತದೆಯಾ ಅಂತ ನೋಡಿದರೆ ಅದೂ ಇಲ್ಲ. ಹೊರಗಡೆ ಜಿಲ್ಲೆಗಳಿಂದ ತರಕಾರಿ ಬರುತ್ತಿಲ್ಲ. ಇರೋದನ್ನು ತಗೊಂಡು ಹೋಗಿ ಅನ್ನೋ ಧ್ವನಿಯಲ್ಲಿ ಮಾತನಾಡುತ್ತಾರೆ” ಎನ್ನುತ್ತಾರೆ ಬೆಂಗಳೂರಿನ ಶ್ರೀನಿವಾಸನಗರ ನಿವಾಸಿ ವೀಣಾ.

“ಮೊನ್ನೆ ಏಕಾಏಕಿ ಜನರು ದಿನಸಿ ಪದಾರ್ಥಗಳನ್ನು ಮುಗಿಬಿದ್ದು ಖರೀದಿಸಿ ಹೋದರು. ಒಂದು ವಾರದಲ್ಲಿ ಮಾರಾಟ ಆಗುವ ಪದಾರ್ಥಗಳೆಲ್ಲ ಎರಡು ದಿನಕ್ಕೇ ಖಾಲಿ ಆಯಿತು. ಆದರೆ ಈಗ ಹೊಸದಾಗಿ ಯಾವ ಸರಕನ್ನೂ ಖರೀದಿ ಮಾಡುವುದಕ್ಕೆ ಆಗುತ್ತಲೇ ಇಲ್ಲ. ನಮ್ಮ ಮನೆಗೆ ಬೇಕು ಅಂದರೆ ಹೇಗೆ ಎಂದು ಆಲೋಚಿಸುವಂತಾಗಿದೆ” ಎನ್ನುತ್ತಾರೆ ಹೊಸಕೆರೆಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುವ ಬಿ.ಎಸ್. ವಿಶ್ವನಾಥ್.

ಇನ್ನು ಏನೇನು ಬೇಕು ಅಂತ ಮುಂಚೆ ಆರ್ಡರ್ ತೆಗೆದುಕೊಳ್ಳುವುದಕ್ಕೆ ಬರುತ್ತಿದ್ದವರೇ ಈಗ ಕಡಿಮೆ ಆಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದಿನಸಿ ಹೇಗೆ ಪೂರೈಸಲಾಗುತ್ತದೆಯೋ ತಿಳಿಯುತ್ತಿಲ್ಲ. ನಮ್ಮಲ್ಲಿಗೆ ರೆಗ್ಯುಲರ್ ಆಗಿ ಬರುವ ಗ್ರಾಹಕರಿಗೂ ಕೇಳಿದ ವಸ್ತುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು.

ಹೇಗೆ ಕೊರೊನಾ ವ್ಯಾಪಿಸುತ್ತಿದ್ದಂತೆ ಮಾಸ್ಕ್, ಸ್ಯಾನಿಟೈಸರ್ ಗಳ ಬೆಲೆ ಹೆಚ್ಚಿಸಲಾಯಿತೋ ಈಗ ಕೂಡ ಅಗತ್ಯ ವಸ್ತುಗಳಿಗೆ ಹೆಚ್ಚಿನ ದರ ಕೇಳುವ ಸಾಧ್ಯತೆ ಇದೆ. “ಕೆಲವರಂತೂ ಯುಗಾದಿ ನೆಪ ಹೇಳಿ ಭಾರೀ ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಜನರ ಸುಲಿಗೆ ಮಾಡಲಾಗುತ್ತಿದೆ. ಈ ಬಗ್ಗೆ ಕೂಡ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ” ಎಂದು ವಿಶ್ವನಾಥ್ ಅಭಿಪ್ರಾಯ ಪಡುತ್ತಾರೆ.

 

Share Post

Leave a Reply

Your email address will not be published. Required fields are marked *

error: Content is protected !!