ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಟಿಕ್ ಟಾಕ್ ಬಳಕೆಗೆ ಮುಂದಾದ ಸರ್ಕಾರ.

ಬೆಂಗಳೂರುಕೊರೋನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಟಿಕ್ ಟಾಕ್ ಬಳಕೆ ಮಾಡಲು ಮುಂದಾಗಿದೆ.

ಟಿಕ್ ಟಾಕ್ ನಲ್ಲಿ ಈಗಾಗಲೇ ಸರ್ಕಾರ 10 ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ವೈರಸ್ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸ್ವತಂತ್ರವಾಗಿ ಓಡಾಡಿದರೆ, ಎದುರಾಗಬಹುದಾದ ಸಮಸ್ಯೆಗಳನ್ನು ವಿವರಿಸಲಾಗುತ್ತಿದೆ.

ಒಂದು ವಿಡಿಯೋದಲ್ಲಿ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಹೋದರಿ ಮನೆಗೆ ಹೋಗೋಣ ಎಂದು ಪತ್ನಿಯೊಬ್ಬಳು ಪತಿಯನ್ನು ಕೇಳಿದ್ದು, ಈ ವೇಳೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡುವ ಪತಿ, ಹೋಗೋಣ, ಹಾಗೆಯೇ ಕೊರೋನಾ ವೈರಸ್’ನ್ನು ಹುಡುಕೋಣ, ಮನೆಗೆ ಕರೆತರೋಣ ಎಂದು ಹೇಳುತ್ತಾನೆ.

ಮತ್ತೊಂದು ವಿಡಿಯೋದಲ್ಲಿ ಸಾಮಾಜಿಕ ಅಂತರ ಹಾಗೂ ಬಂದ್ ನಿಂದಾಗಿ ಬೇಸತ್ತ ಜನರು, ಬೇಸರ ದೂರಾಗಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗಲು ನಿರ್ಧರಿಸುತ್ತಾರೆ. ಬಳಿಕ ಹೊರಗೆ ಹೋದರೆ ತಮ್ಮ ಆರೋಗ್ಯ ಹಾಳಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ.

ಇನ್ನೊಂದು ವಿಡಿಯೋದಲ್ಲಿ ಪಾತ್ರೆ ತೊಳೆಯುವ ಮಹಿಳೆಯೊಬ್ಬರು, ಯಾವಾಗಲೂ ಪಾತ್ರೆ ತೊಳೆಯುವ ಕಾಲವಿತ್ತು. ಆದರೆ, ಇದೀಗ ಎಲ್ಲಾ ಸಮಯದಲ್ಲೂ ಕೈತೊಳೆಯುವ ಕಾಲ ಬಂದಿದೆ. ಪಾತ್ರೆ ತೊಳೆಯದೇ ಹೋದರೂ ಕೂಡ ನಾವು ಬದುಕುತ್ತೇವೆ. ಆದರೆ, ಕೈತೊಳೆಯದೇ ಹೋದರೆ ಬದುಕುವುದಿಲ್ಲ ಎಂದು ಹೇಳುತ್ತಾರೆ.

ಅದರಂತೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿರುವ ಸರ್ಕಾರ, ಯುಗಾದಿ ಹಬ್ಬ, ಹಬ್ಬದ ಅಡುಗೆ ಮಾಡಬೇಕೆಂದು ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಮಾರುಕಟ್ಟೆಗೆ ಹೋಗದಿರಿ. ಹೋಗಿದ್ದೇ ಆದರೆ, ನಿಮ್ಮ ತಿಥಿ ಊಟಕ್ಕೆಸಿದ್ಧರಾಗಬೇಕಾಗುತ್ತದೆ ಎಂದು ಹೇಳುತ್ತಾರೆ. ಇದಷ್ಟೇ ಅಲ್ಲದೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ವಿಡಿಯೋ ಕೂಡ ಇದ್ದು, ಯುಗಾದಿ ಹಬ್ಬದ ದಿನದಂದು ಮನೆಯಲ್ಲಿಯೇ ಇರಿ ಎಂದು ಹೇಳಿರುವ ವಿಡಿಯೋ ಕೂಡ ಇರುವುದು ಕಂಡು ಬಂದಿದೆ.

 

Share Post

Leave a Reply

Your email address will not be published. Required fields are marked *

error: Content is protected !!