ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ಮತ್ತು ಸರ್ಕಾರವನ್ನುದೂಷಿಸಬೇಡಿ: ಜನತೆಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು:ನಾಳೆ ಯುಗಾದಿ ಹಬ್ಬದ ಖರೀದಿಗಾಗಿ ಯಾರೂ ಮಾರುಕಟ್ಟೆಗೆ ಹೋಗಿ ಜನದಟ್ಟಣೆಯಲ್ಲಿ ಸೇರಬೇಡಿ, ಸಾಧ್ಯವಾದಷ್ಟು ಮಾರ್ಚ್ 31ರವರೆಗೆ ಮನೆಬಿಟ್ಟು ಹೊರಗೆ ಹೋಗಬೇಡಿ, ಅಗತ್ಯ ತುರ್ತು ಕೆಲಸಗಳಿದ್ದರೆ ಮಾತ್ರ ಹೊರಹೋಗಿ ಎಂದು ಸಿಎಂ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ 31ರವರೆಗೆ ಕರೆ ನೀಡಿರುವ ಸಂಪೂರ್ಣ ಲಾಕ್ ಡೌನ್ ಗೆ ಎಲ್ಲ ಜನರ ಸಹಕಾರ ಅತ್ಯಗತ್ಯ. ಪ್ರಧಾನ ಮಂತ್ರಿಯವರೇ ಜನರು ಮನೆಯಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ವಿಮಾನ ಹಾರಾಟಗಳನ್ನು ನಿಷೇಧಿಸಲಾಗಿದೆ ಎಂದ ಮೇಲೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಜನರು ಮನೆಬಿಟ್ಟು ಸುಖಾಸುಮ್ಮನೆ ಹೊರಗೆ ಬಂದರೆ ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರ ಜನತೆಗೆ ಈ ಸಂದರ್ಭದಲ್ಲಿ ನಾನು ಅಂತಿಮ ಎಚ್ಚರಿಕೆ ಮತ್ತು ಮನವಿ ಮಾಡಿಕೊಳ್ಳುತ್ತಿದ್ದೇನೆ, ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೊರೋನಾ ವೈರಸ್ ನಿಯಂತ್ರಣಕ್ಕೆ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಅಷ್ಟಕ್ಕೂ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡರೆ ರಾಜ್ಯ ಸರ್ಕಾರ ಅಥನಾ ನನ್ನನ್ನು ದೂಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಸಮಸ್ತ ನಾಗರಿಕ ಬಂಧುಗಳ ಗಮನಕ್ಕೆ
ಬೆಂಗಳೂರಿನಲ್ಲಿ ಕೆಲವೆಡೆ ಎಂದಿನಂತೆ ಜನಸಂದಣಿ ಅನಗತ್ಯವಾಗಿ ಸೇರುತ್ತಿರುವುದು ಸರಿಯಲ್ಲ. ಇದು ಸೋಂಕು ಹರಡುವುದನ್ನು ತಡೆಯುವ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ.
ಅತ್ಯಂತ ಅಗತ್ಯ ವಸ್ತುಗಳನ್ನು ಕೊಳ್ಳಲು ಹಾಗೂ ಇತರ ಅತ್ಯಗತ್ಯ ಸಂದರ್ಭದಲ್ಲಿ ಮಾತ್ರ ಹೊರಗಡೆ ಬರಬೇಕು.

 

Share Post

Leave a Reply

Your email address will not be published. Required fields are marked *

error: Content is protected !!