ನಿರ್ಲಕ್ಷ್ಯತನ ಒಳ್ಳೆಯದಲ್ಲ ಬದುಕಿದ್ರೆ ಮುಂದಿನ ವರ್ಷವೂ ಯುಗಾದಿ ಮಾಡಬಹುದು : ಆರ್.ಅಶೋಕ್

ಬೆಂಗಳೂರು, ಮಾ.24- ನಾವು ಬದುಕಿದ್ರೆ ಮುಂದಿನ ವರ್ಷವೂ ಹಬ್ಬ ಮಾಡಬಹುದು. ಹಬ್ಬದ ಸಂಭ್ರಮಕ್ಕೆ ಯಾರೂ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಹರಡಲು ಕಾರಣರಾಗಬೇಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬದ ಸಂಭ್ರಮದ ಬಗ್ಗೆ ನಮಗೆ ಅರಿವಿದೆ. ಆದರೆ, ಪರಿಸ್ಥಿತಿ ಸರಿಯಿಲ್ಲ. ಎಲ್ಲ ಕಡೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ನಮ್ಮ ಮನೆಯಲ್ಲೂ ಕೂಡ ಹೆಚ್ಚು ಆಡಂಬರ ಮಾಡದೆ ಹೂವಿಟ್ಟು ಪೂಜೆ ಮಾಡಿ ಸರಳವಾಗಿ ಹಬ್ಬ ಆಚರಿಸುವಂತೆ ಸೂಚಿಸಿದ್ದೇವೆ.

ಹಬ್ಬಕ್ಕಾಗಿ ದಿನನಿತ್ಯದ ಸಾಮಾನು ಖರೀದಿಸಲು ಬೀದಿಗೆ ಬಂದು ಜನಜಂಗುಳಿ ಉಂಟುಮಾಡಬೇಡಿ. ಇದರಿಂದ ಬೇರೆಯವರಿಗೂ ತೊಂದರೆಯಾಗಲಿದೆ ಎಂದು ಮನವಿ ಮಾಡಿದರು.ಮೊದಲು ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಸರ್ಕಾರ ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.ನಾವು ಬದುಕಿದ್ದರೆ ಮುಂದಿನ ವರ್ಷವೂ ಹಬ್ಬ ಮಾಡಬಹುದು.ಮಾರ್ಚ್ 31ರ ವರೆಗೆ ಶಿಸ್ತಿಗೆ ಬದ್ಧರಾಗಿ ನಡೆದುಕೊಳ್ಳಿ. ನಿರ್ಲಕ್ಷ್ಯತನ ಒಳ್ಳೆಯದಲ್ಲ ಎಂದು ಹೇಳಿದರು.

ನಿಯಮ ಉಲ್ಲಂಘನೆ ಮಾಡಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಹಾಗಾಗಿ ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರಿ ಎಂದು ಹೇಳಿದರು. ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ನಿಯಂತ್ರಣ ಹಾಗೂ ಮುಂಜಾಗ್ರತೆ ಬಗ್ಗೆ ಇಂದು ಸಂಜೆ ಜಿಲ್ಲಾಧಿಕಾರಿಗಳ ಜತೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಅವರು ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!