ಕೊರೋನಾ ವಿರುದ್ಧ ಹೋರಾಡಲು 3ಟಿ ಫಾರ್ಮುಲಾ ಬಳಕೆಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಇಡೀ ರಾಷ್ಟ್ರಕ್ಕೆ ತಲೆನೋವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ 3ಟಿ ಫಾರ್ಮುಲಾ ಬಳಕೆಗೆ ಮುಂದಾಗಿದೆ.

ಟ್ರೇಸಿಂಗ್, ಟೆಸ್ಟಿಂಗ್ ಆಯಂಡ್ ಟ್ರೀಟಿಂಗ್ ಎಂಬ 3ಟಿ ಫಾರ್ಮುಲಾ ಬಳಕೆ ಮಾಡಲು ರಾಜ್ಯ ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಪರೀಕ್ಷಾ ಮಾಡುವುದರಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಕಾಂಗ್ರಸ್ ನಾಯಕ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆಂದೂ ಕಂಡು ಕೇಳಿರದ ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿದೆ. ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಕ್ಕಿಂತಲೂ ನಮ್ಮ ರಾಜ್ಯದಲ್ಲಿ 7 ಪರೀಕ್ಷಾ ಕೇಂದ್ರಗಳಿವೆ. ಮಹಾರಾಷ್ಟ್ರದಲ್ಲಿ 2-3 ಮೂರು ಪರೀಕ್ಷಾ ಕೇಂದ್ರಗಳಿವೆ. ಪ್ರತೀ ಕೇಂದ್ರದಲ್ಲಿ 80-100 ಪರೀಕ್ಷೆಗಳನ್ನು ಒಂದು ದಿನದಲ್ಲಿ ಮಾಡಬಹುದು ಎಂದು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳು ಜರ್ಮನಿಯಿಂದ ಬರುವ ರೀಏಜೆಂಟ್ ಗಳ ಮೇಲೆ ಅವಲಂಬಿತವಾಗಿವೆ. ಆದರೆ, ಪ್ರಸ್ತುತ ಜರ್ಮನಿ ರಾಷ್ಟ್ರದಲ್ಲಿಯೇ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದ್ದಾರೆ.

ಇದೇವೇಳೆ ವಯಸ್ಸಾದ ವ್ಯಕ್ತಿಗಳಿಗೆ ಮೊದಲು ಆದ್ಯತೆ ನೀಡಬೇಕೆಂಬ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಸಲಹೆಯನ್ನು ಸುಧಾಕರ್ ಒಪ್ಪಿದ್ದಾರೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಸಹಾಯ ಮಾಡಲು ಐಐಎಸ್’ಸಿ ಹಾಗೂ ಬಯೋಕಾನ್ ಮುಂದಕ್ಕೆ ಬಂದಿದೆ. ಐಐಎಸ್’ಸಿ ಅತ್ಯಂತ ಕಡಿಮೆ ದರದಲ್ಲಿ ಪರೀಕ್ಷೆ ಮಾಡುವ ಆಫರ್ ನೀಡಿದೆ. ನಾನು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರುಸ, ಬೆಳಿಗ್ಗೆ 5 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಸತತ ಕಾರ್ಯನಿರ್ವಹಿಸುತ್ತಿದ್ದೇವೆ. ನಾರಾಯಣ ಹೃದಯಾಲಯದ ಡಾ.ದೇವಿ ಶೆಟ್ಟಿ, ಮಣಿಪಾಲ್ ಆಸ್ಪತ್ರೆಯ ಡಾ.ಸುಧರ್ಶನ್ ಬಲ್ಲಾಳ್ ಹಾಗೂ ಫೋರ್ಟಿಸ್ ಆಸ್ಪತ್ರೆಯ ವೈದ್ಯರೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿ, ಕೊರೋನಾ ಮಟ್ಟಹಾಕುವ ಕುರಿತು ಮಾತುಕತೆ ನಡೆಸಲಾಗಿದೆ.

ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹೋಟೆಲ್ ಸೇರಿದಂತೆ ಇತರೆ ತಾತ್ಕಾಲಿಕ ಸ್ಥಳಗಳಲ್ಲಿ ರೋಗಿಗಳಿಗೆ ಚಿಕಿತ್ಸಾ ಅವಕಾಶ ಕಲ್ಪಿಸಬಹುದು. ಈಗಾಗಲೇ ಆನಂದ್ ಮಹೇಂದ್ರ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ರೆಸಾರ್ಟ್ ಹಾಗೂ ಹೋಟೆಲ್ ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ವಿದೇಶದಿಂದ 43,000 ಜನರು ರಾಜ್ಯಕ್ಕೆ ಬಂದಿಳಿದಿದ್ದು, ಇದರಲ್ಲಿ 23,000 ಮಂದಿ ನಾಪತ್ತೆಯಾಗಿದ್ದಾರೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿ, ನಾಪತ್ತೆಯಾಗಿರುವವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಅವರನ್ನು ಶೀಘ್ರದಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿರಸಲಾಗುತ್ತದೆ ಎಂದು ಹೇಳಿದರು.

ಕೊರೋನಾ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ರಾಜಕೀಯ ಹಾಗೂ ಸಾಮಾಜಿಕವಾಗಿ ಹೋರಾಡಬೇಕಿದೆ. ಪ್ರಸ್ತುತ ಈ ವೈರಸ್’ಗೆ ಯಾವುದೇ ಔಷಧಿಗಳು, ಚುಚ್ಚುಮದ್ದುಗಳು ಲಬ್ಯವಿಲ್ಲ. ಇದಕ್ಕೆ ಇರುವುದು ಒಂದೇ ಒಂದು ಔಷಧಿ ಎಂದರೆ ಸಾಮಾಜಿಕ ಅಂತರವಷ್ಟೇ ಎಂದು ತಿಳಿಸಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!