ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಶಿಕ್ಷಣ ಸಚಿವರ ಭೇಟಿ : ಸಮಾಲೋಚನೆ

 

 

/ಕೊಳ್ಳೇಗಾಲ ವರದಿ

ಮಾರ್ಚ್, 21 – ಇದೇ 27 ರಿಂದ ಏಪ್ರಿಲ್ 9 ರ ವರೆಗೆ ನಡೆಯಲಿರುವ ಎಸ್ಎಸ್ಎಲ್‌ಸಿ ಪರೀಕ್ಷೆ ಹಿನ್ನಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹಾಗೂ ನಗರದ ಒಟ್ಟು ಹತ್ತು ವಿದ್ಯಾರ್ಥಿನಿಯರ ಮನೆಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.

‌           ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರುಗಳಾದ ಭಾನುಪ್ರಿಯ, ಮೋನಿಕಾ, ವಿದ್ಯಾ, ಪವಿತ್ರ ಮತ್ತು ಕೊಳ್ಳೇಗಾಲದ ಸರ್ಕಾರಿ ಎಸ್‌ವಿ‌ಕೆ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರುಗಳಾದ ಸ್ನೇಹಾ, ನಿಸರ್ಗಪ್ರಿಯ, ದಿವ್ಯ, ಸ್ಪೂರ್ತಿ, ಪವಿತ್ರ ಹಾಗೂ ಮಮತ ಸೇರಿ ಒಟ್ಟು ಹತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು ಪರೀಕ್ಷೆಯ ಹಿನ್ನೆಲೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಎಸ್ಎಸ್ಎಲ್‌ಸಿ ಪರೀಕ್ಷೆಗೆ ಮಕ್ಕಳು ಯಾವ್ಯಾವ ರೀತಿ ತಯಾರಿ ಮಾಡಿಕೊಂಡಿದ್ದಾರೆಂಬ ಬಗ್ಗೆ  ಹಾಗೂ ಅಧ್ಯಯನ ರಜೆ ಸಮಯದಲ್ಲಿ ಮಾಡಿದ ಅಭ್ಯಾಸಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. 1 ರಿಂದ 6 ನೇ ತರಗತಿಯ ಈ ಸಾಲಿನ ಪರೀಕ್ಷೆ ರದ್ದು ಮಾಡಲಾಗಿದ್ದು ಎಸ್ಎಸ್ಎಲ್‌ಸಿ ಪರೀಕ್ಷೆಯನ್ನೂ ಸಹ ರದ್ದು ಮಾಡಬೇಕೆ ಎಂದು ಮಕ್ಕಳ ಆಸಕ್ತಿ ಪರೀಕ್ಷಿಸಲು ಪ್ರಶ್ನಿಸಿದರು. ಮಕ್ಕಳು ತಾವು ಪರೀಕ್ಷೆ ಬರೆಯಲು ಸಜ್ಜಾಗಿದ್ದು ಯಾವುದೇ ಕಾರಣಕ್ಕೂ ರದ್ದು ಮಾಡದಂತೆ ಹೇಳಿದರು. ವಿದ್ಯಾರ್ಥಿಗಳ ಮಾತಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪರೀಕ್ಷೆ ಬಗ್ಗೆ ಯಾವುದೇ ಭಯ ಬೇಡ. ಯಾವುದೇ ಪ್ರಶ್ನೆ ಅಥವಾ ಸಂಶಯಗಳಿದ್ದರೆ ಕೂಡಲೇ ಸಂಬಂಧ ಪಟ್ಟ ಶಿಕ್ಷಕರಿಗೆ ಫೋನ್ ಮೂಲಕ ಸಂಪರ್ಕಿಸಿ ನಿಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕು ಎಂದು ತಿಳಿಸಿದರು‌.

ಪರೀಕ್ಷೆ ತೆರಳುವಾಗ ತಿಂಡಿ ಮಾಡಿರಬೇಕು. ತಿಂಡಿ ಮಾಡದೆ ಹಸಿವಲ್ಲಿ ಪರೀಕ್ಷೆಗೆ ತೆರಳಬಾರದು‌. ಪರೀಕ್ಷೆಗೆ ಕುಳಿತಾಗ ಮೊದಲು ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಒಮ್ಮೆ ಓದಿಕೊಳ್ಳಬೇಕು. ಚೆನ್ನಾಗಿ ಗೊತ್ತಿರುವ ಮತ್ತು ಸುಲಭದ ಉತ್ತರಗಳನ್ನು ಮೊದಲು ಬರೆದುಬಿಡಬೇಕು ಎಂಬೆಲ್ಲಾ ಮಾಹಿತಿಗಳನ್ನು ಸಚಿವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಮಕ್ಕಳೊಂದಿಗಿನ ಸಮಾಲೋಚನೆ ಕಾರ್ಯಕ್ಕೆ ಸಚಿವರಿಗೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹಾಗೂ ಹನೂರು ಶಾಸಕ ಆರ್.ನರೇಂದ್ರ ಸಾಥ್ ನೀಡಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಎಚ್.ಬಿ.ನಾರಾಯಣರಾವ್, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಡಿಡಿಪಿಐ ಎಸ್.ಟಿ.ಜವರೇಗೌಡ, ಡಿವೈಪಿಸಿ ಮಂಜುನಾಥ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಸದಸ್ಯರುಗಳಾದ ಜಿ.ಪಿ.ಶಿವಕುಮಾರ್, ಕವಿತಾ, ಡಿವೈಎಸ್‌ಪಿ ನವೀನ್‌ಕುಮಾರ್, ಸಿಪಿಐ ಶ್ರೀಕಾಂತ್, ಪಿಎಸ್ಐಗಳಾದ ರಾಜೇಂದ್ರ ಹಾಗೂ ವಿ.ಸಿ‌.ಅಶೋಕ್ ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!