ಕೊರೋನಾ ಭೀತಿಯಿಂದ ಮನೆ ಬಿಟ್ಟು ಹೊರಬರದ ಸಿಎಂ ಯಡಿಯೂರಪ್ಪ

ಬೆಂಗಳೂರು,ಮಾ.;-ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕೊರೋನಾ ಸೋಂಕಿನ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಯಾರೊಬ್ಬರನ್ನೂ ಭೇಟಿಯಾಗದೆ ಮನೆಯಲ್ಲೇ ಸ್ವಯಂ ನಿರ್ಬಂಧಕ್ಕೊಳಗಾಗಿದ್ದರು. ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರಲಿಲ್ಲ. ಸಾಮಾನ್ಯವಾಗಿ ಕಾರ್ಯಕ್ರಮಗಳು ಇಲ್ಲದಿದ್ದರೂ ಮನೆಗೆ ಸಚಿವರು, ಶಾಸಕರು, ಕಾರ್ಯಕರ್ತರು, ಹಿತೈಷಿಗಳು, ಸಂಬಂಧಿಕರು ದೂರದೂರುಗಳಿಂದ ಸಾಮಾನ್ಯ ಬರುತ್ತಿರುತ್ತಾರೆ.ಆದರೆ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ಮೈತ್ರಾದೇವಿ ನಿವಾಸಕ್ಕೆ ಅಕ್ಷರಶಃ ನಿರ್ಬಂಧ ಹಾಕಲಾಗಿತ್ತು. ಬೆರಳೆಣಿಕೆಯ ಆಪ್ತರನ್ನು ಹೊರತುಪಡಿಸಿದರೆ ಯಾರೊಬ್ಬರನ್ನೂ ಮನೆಯೊಳಗೆ ಬಿಡದಂತೆ ಪೊಲೀಸರಿಗೆ ಸೂಚನೆ ಕೊಡಲಾಗಿತ್ತು. ಸ್ವತಃ ಯಡಿಯೂರಪ್ಪ ಕೂಡ ಅನಗತ್ಯವಾಗಿ ಯಾರೊಬ್ಬರು ಮನೆಗೆ ಬಾರದಂತೆ ಮನವಿ ಮಾಡಿಕೊಂಡಿದ್ದರು.

ಪರಿಸ್ಥಿತಿ ಸುಧಾರಿಸುವವರೆಗೂ ಸ್ವಯಂ ನಿರ್ಬಂಧ ಹಾಕಿಕೊಳ್ಳೋಣ, ಪ್ರಧಾನಿಯವರು ನಾಳೆ ಕರೆ ಕೊಟ್ಟಿರುವ ಜನತಾ ಕಫ್ರ್ಯೂ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದ್ದಾರೆ. ಇನ್ನು ಬಿಎಸ್‍ವೈ ಅವರು ತಮ್ಮ ಭದ್ರತಾ ಸಿಬ್ಬಂದಿಯನ್ನು ಕಡಿತ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದರೆ ಗುಂಪು ಗುಂಪಾಗಿ ಜನಸೇರುವ ಸಾಧ್ಯತೆ ಇದೆ. ಹಾಗಾಗಿ ಇಂದು ಮತ್ತು ನಾಳೆ ಭದ್ರತೆಯನ್ನು ಕಡಿತಗೊಳಿಸಲಾಗಿದ್ದು, ಕೆಲವೇ ಕೆಲವು ಮಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.ಇನ್ನು ಪೊಲೀಸರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಭದ್ರತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಸಿಎಂ ಮನೆಗೆ ಬರುವುದನ್ನು ತಡೆಯುವ ಉದ್ದೇಶದಿಂದ ರಸ್ತೆಯಲ್ಲೇ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಯಾರೊಬ್ಬರನ್ನೂ ಒಳಬಿಡದಂತೆ ಪೊಲೀಸರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!