ಕಂದಾಯ ಇಲಾಖೆಯಲ್ಲಿ ಲಂಚದ ಮೆನ್ಯು ಮಾಡಿಕೊಂಡಿರುವವರಿಗೆ ಕಡಿವಾಣ ಹಾಕುವವರು ಯಾರು ಇಲ್ಲವೇ ?- ನಾರಾಯಣ ಸ್ವಾಮಿ ಕಳವಳ

ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಪ್ರತಿಯೊಂದು ಕೆಲಸಗಳಿಗೆ ಇಷ್ಟಿಷ್ಟು ಲಂಚ ನೀಡಬೇಕೆಂದು ಮೆನ್ಯು ಮಾಡಿಕೊಂಡಿದ್ದಾರೆ. ಸರ್ಕಾರ ಇಂಥವರಿಗೆ ಕಡಿವಾಣ ಹಾಕದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗಿ ಹೋಗುತ್ತದೆ ಎಂದು ವಿಧಾನಪರಿಷತ್‍ನ ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಸಂವಿಧಾನದ ಮಹತ್ವದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಇಂದು ಅಧಿಕಾರಿಗಳಿಗೆ ಹಣ ಕೊಡದಿದ್ದರೆ ಒಂದೇ ಒಂದುಕೆಲಸವೂ ಆಗುವುದಿಲ್ಲ. ಇಂತಿಂಥ ಕೆಲಸಗಳಿಗೆ ಇಂತಿಷ್ಟು ಲಂಚ ಕೊಡಬೇಕೆಂದು ಮೆನ್ಯು ಮಾಡಿಕೊಂಡಿದ್ದಾರೆ. ಅವರಿಗೆ ಕಡಿವಾಣ ಹಾಕುವವರು ಯಾರು ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ನಮ್ಮ ನಮ್ಮ ಸ್ವಂತ ಆಸ್ತಿಗಳಿಗೆ ನೋಂದಣಿ, ಪೋಡಿ ಮಾಡಿಸಿಕೊಳ್ಳಬೇಕೆಂದರೆ ನೂರಾರು ಬಾರಿ ಕಚೇರಿಗೆ ಅಲೆಯಬೇಕು. ಲಂಚ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಒಂದಿಲ್ಲೊಂದು ಕುಂಟು ನೆಪಗಳನ್ನು ಹೇಳಿ ಮುಂದೂಡುತ್ತಾರೆ. ಈ ಅಧಿಕಾರಿಗಳನ್ನು ಮಟ್ಟ ಹಾಕಲು ಮುಂದಾದರೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಸ್ವತಃ ಕಂದಾಯ ಸಚಿವರಾದ ಆರ್.ಅಶೋಕ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ಹೀಗಾದರೆ ಜನಸಾಮಾನ್ಯರ ಪಾಡೇನು ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ಲಂಚ ಕೊಡದಿದ್ದರೆ ನಮ್ಮ ಆಸ್ತಿಯನ್ನು ಬೇರೊಬ್ಬರಿಗೆ ನೋಂದಾಯಿಸಿಕೊಡುತ್ತಾರೆ. ನಮಗೆ ಎಸಿ ನ್ಯಾಯಾಲಯದಲ್ಲಿ ಹಿನ್ನಡೆಯಾದರೆ ಡಿಸಿ ನ್ಯಾಯಾಲಯಕ್ಕೆ ಮೇಲ್ಮನೆ ಸಲ್ಲಿಸುತ್ತೇವೆ. ಅಲ್ಲಿ ನಮಗೆ ಜಯ ಸಿಕ್ಕರೆ ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಲು ಹೋದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ತಮ್ಮದೇ ಕೂಟ ರಚಿಸಿಕೊಂಡು ನಮ್ಮ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಬಿಳಿ ಬಟ್ಟೆ ಹಾಕಿಕೊಂಡ ರಾಜಕಾರಣಿಗಳು, ಭ್ರಷ್ಟರು ಮತ್ತು ವಿಲನ್‍ಗಳು. ಆದರೆ ತಪ್ಪನ್ನು ಮಾಡುವ ಅಧಿಕಾರಿಗಳು ಮಾತ್ರ ಎಲ್ಲಿಯೂ ಸಿಕ್ಕಿಹಾಕಿಕೊಳ್ಳುವುದಿಲ್ಲ. ಇದು ಇಂದಿನ ವ್ಯವಸ್ಥೆ ಎಂದು ಜರಿದರು. ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿಗೆ ಪ್ರಚಾರದ ಸಂದರ್ಭದಲ್ಲಿ ಖರ್ಚು ವೆಚ್ಚವಾ ಒಬ್ಬ ವ್ಯಕ್ತಿಗೆ 27 ಲಕ್ಷ ಹಣವನ್ನು ನಿಗದಪಡಿಸುತ್ತದೆ. ಆದರೆ ಇಂದು ಒಬ್ಬೊಬ್ಬ ಅಭ್ಯರ್ಥಿ ನೂರಾರು ಕೋಟಿ ಹಣ ಖರ್ಚು ಮಾಡುತ್ತಾನೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ ನೂರಾರು ಕೋಟಿ ಹಂಚಲಾಗಿತ್ತು. ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆಯೇ? ಯಾರಾದರ ಮೇಲೂ ಕ್ರಮ ಕೈಗೊಂಡಿದಿಯೇ ಎಂದು ಪ್ರಶ್ನಿಸಿದರು. ಬಹುಮತ ಪಡೆದು ಸರ್ಕಾರವನ್ನೇ ಬಂಡವಾಳಶಾಹಿಗಳು ಇಂದು ಅಸ್ಥಿರಗೊಳಿಸುತ್ತಾರೆ. ಶಾಸಕರನ್ನು ಕುದುರೆ ವ್ಯಾಪಾರ ಮಾಡುವ ಮೂಲಕ ಖರೀದಿಸುತ್ತಾರೆ. ಕರ್ನಾಟಕ ಇರಬಹುದು ಅಥವಾ ಈಗ ಮಧ್ಯಪ್ರದೇಶದಲ್ಲಿ ಶಾಸಕರನ್ನು ಎತ್ತಿಹಾಕಿಕೊಂಡು ಬರಲಾಗಿದೆ. ನಾವು ಎತ್ತ ಹೋಗುತ್ತಿದ್ದೇವೆ ಎಂದು ನೋವು ತೋಡಿಕೊಂಡರು.

ಈ ವೇಳೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಮಧ್ಯಪ್ರದೇಶದ ಬಗ್ಗೆ ಈ ಸದನದಲ್ಲಿ ಮಾತನಾಡಬೇಡಿ. ಅಷ್ಟಕ್ಕೂ ಸ್ವಾತಂತ್ರ್ಯ ಬಂದ ನಂತರ ನೀವು ಎಲ್ಲೆಲ್ಲಿ ಎಷ್ಟು ಸರ್ಕಾರವನ್ನು ಉರುಳಿಸಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಬಿಜೆಪಿ ಮಹಂತೇಶ್ ಕವಟಗಿಮಠ ತಿರುಗೇಟು ನೀಡಿದರು. ದೇಶದಲ್ಲಿ ಇಂದು ಆರ್‍ಬಿಐ, ಸಿಬಿಐ, ಇಡಿ, ಐಟಿಯಂತಹ ಸ್ವಾಯತ್ತ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ.

ದೆಹಲಿಯಲ್ಲಿ ಸಿಎಎ, ಎನ್‍ಸಿಆರ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ದ ಎಫ್‍ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್‍ನ ನ್ಯಾಯಾಧೀಶರೊಬ್ಬರು ಆದೇಶ ಮಾಡಿದರು. ಆದರೆ ರಾತ್ರಿ 12 ಗಂಟೆಯೊಳಗೆ ಅವರನ್ನು ವರ್ಗಾವಣೆ ಮಾಡಲಾಯಿತು. ಇದು ಈಗಿನ ವ್ಯವಸ್ಥೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಸಚಿವ ಸುರೇಶ್‍ಕುಮಾರ್ ಅವರು, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ನ್ಯಾಯಾಧೀಶರನ್ನು ಒಂದು ವಾರ ಮುಂಚಿತವಾಗಿಯೇ ವರ್ಗಾವಣೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಅವರ ಒಪ್ಪಿಗೆ ಪಡೆದು ಸಮ್ಮತಿಸಿದ ನಂತರ ವರ್ಗಾವಣೆ ಮಾಡಲಾಯಿತು ಎಂದು ಸಮರ್ಥಿಸಿಕೊಂಡರು.

ಇಂದಿರಾಗಾಂಧಿ ಅವರು 20 ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದರು. ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಲಕ್ಷಾಂತರ ಮಂದಿ ಖಾತೆಗಳನ್ನು ತೆರೆದರು. ಆದರೆ ಇಂದು ಬ್ಯಾಂಕ್‍ಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ. ಇದಕ್ಕೆಲ್ಲ ಯಾರು ಕಾರಣ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಅವರು ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನೇ ಒಡೆಯ ಎಂದು ಘೋಷಿಸಿದರು. ಪರಿಣಾಮ ಲಕ್ಷಾಂತರ ಮಂದಿ ಜಮೀನಿನ ಹಕ್ಕು ಹೊಂದಿದರು ಎಂದರು.

ಇದಕ್ಕೆ ಆಕ್ಷೇಪಿಸಿದ ಗೋವಿಂದ ಕಾರಜೋಳ, ದೇವರಾಜ ಅರಸು ಭೂಸುಧಾರಣೆ ಕಾಯ್ದೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಿದರು. ಆದರೆ ಈ ಕಾಯ್ದೆ ಬೇರೆ ರಾಜ್ಯಗಳಲ್ಲಿ ಏಕೆ ಅನುಷ್ಠಾನವಾಗಲಿಲ್ಲ ಎಂದು ಪ್ರಶ್ನಿಸಿದರು.

 

Share Post

Leave a Reply

Your email address will not be published. Required fields are marked *

error: Content is protected !!