ರಾಜ್ಯದಲ್ಲಿ ಕ್ಯಾಸಿನೋ ತೆರಯುವ ಕುರಿತು ಸಚಿವ ಸಿ.ಟಿ.ರವಿ ಹೇಳಿದ್ದೇನು ಗೊತ್ತಾ ?

ಉಡುಪಿ ವರದಿ

ಫೆಬ್ರವರಿ 22 -“ಕ್ಯಾಸಿನೋ ಕೇಂದ್ರ ತೆರೆಯಬೇಕೆಂದು ನಾನು ನೇರವಾಗಿ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗಾಯಿತೆಂದು ಹೇಳಿದ್ದೇನಷ್ಟೇ. ಯೋಜನೆ‌ ಸಿದ್ಧಪಡಿಸುವುದು ಸರ್ಕಾರದ ‌ಕೆಲಸ” ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ತೆರೆಯುವ ಕುರಿತು ಹೇಳಿಕೆ ನೀಡಿದ್ದ ಸಚಿವ ಸಿ.ಟಿ.ರವಿ ವಿರುದ್ಧ ಟೀಕೆ ಕೇಳಿಬಂದಿದ್ದು ಇದೀಗ ಅವರು ನೇರವಾಗಿ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಾತನಾಡಿದ ಅವರು ನಾನು ಅಮೆರಿಕಾದಲ್ಲಿರುವ ವಾಸ್ತವಾಂಶವನ್ನಷ್ಟೇ ಹೇಳಿದ್ದೇನೆ. ಅಮೆರಿಕಾದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್ ಗಳಿವೆ. ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು. ಶ್ರೀಲಂಕಾ, ಲಾಸ್ ವೇಗಾಸ್ ನಲ್ಲಿ‌ ಭಾರತೀಯ ಪ್ರವಾಸಿಗರ ದಂಡೇ ಇದೆ” ಎಂದು ಹೇಳಿದ್ದಾರೆ.

ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಮ್ಮ‌ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಪ್ರವಾಸಿಗರು ವಿದೇಶಕ್ಕೆ ‌ದುಡ್ಡು ಹರಿಸಿದರೆ ನಮ್ಮ ದೇಶಕ್ಕೆ ನಷ್ಟ. ವಿದೇಶಕ್ಕೆ ಹೋಗುವವರನ್ನು ತಡೆಯಲು‌ ಸಾಧ್ಯವಿಲ್ಲ. ಹಾಗಾಗಿ ನಮ್ಮಲ್ಲಿ ಪ್ರವಾಸಿ ತಾಣ ನಿರ್ಮಿಸುವ ಅಗತ್ಯವಿದೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದರು.

ಗೋವಾ ಕ್ಲಬ್ ಹಾಗೂ ಪಬ್ ನಿಂದಾಗಿ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ‌ ದುಡ್ಡು ಸುರಿಯುತ್ತಿದ್ದಾರೆ. ಇದು‌ ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ, ಗೃಹ ಇಲಾಖೆ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ ಎಂದರು.

Share Post

Leave a Reply

Your email address will not be published. Required fields are marked *

error: Content is protected !!