ಕೋಲಿ ಸಮಾಜದ ಅಭಿವೃದ್ಧಿಗೆ ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆಗೆ ಆಗ್ರಹ

ಯಾದಗಿರಿ ಸುದ್ದಿ

ಫೆಬ್ರವರಿ, 13 – ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತೀ ಹಿಂದುಳಿದ ಟೋಕರಿ ಕೋಲಿ ಕಬ್ಬಲಿಗ ಸಮಾಜದ ಹಿತಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಬಿಡುಗಡೆಗೆ ಮುಂದಾಗಬೇಕೆಂದು ಜಿಲ್ಲಾ ಟೋಕರಿ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕೋಲಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರಕಾರದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಸಮಾಜದ ಬಗ್ಗೆ ಸಂಪೂರ್ಣ ಮಾಹಿತಿ ಮುಖ್ಯಮಂತ್ರಿಗಳಿಗಿದೆ. ಲೋಕಸಭೆ ಚುನಾವಣೆಯಲ್ಲಿಯೂ ಸಹ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿಕೊಡುವಲ್ಲಿ ನಮ್ಮ ಸಮಾಜ ಬಹಳ ಮಹತ್ವದ ಪಾತ್ರ ವಹಿಸಿದೆ. ಹಾಗಾಗಿ ಸಮಾಜದ ಹಿತ ಕಾಯಲು ಮುಂಬರುವ ಬಜೆಟ್‌ನಲ್ಲಿ ನೂರು ಕೋಟಿಗಿಂದ ಹೆಚ್ಚಿನ ಅನುದಾನ ಘೋಷಣೆ ಮಾಡಿ ಸಾಮಾಜಿಕ ನ್ಯಾಯ ಒದಗಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಮ್ಮ ಸಮಾಜದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ವಸತಿ ನಿಲಯಗಳು, ಸಮುದಾಯ ಭವನ ನಿರ್ಮಾಣ ಮಾಡಬೇಕು. ರಾಜಕೀಯವಾಗಿ ಹಿಂದುಳಿದಿರುವ ಸಮಾಜಕ್ಕೆ ಮುಂಬರುವ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕು. ಕೃಷಿಕೂಲಿ ಕಾರ್ಮಿಕರಿಗೆ, ಬಡ ರೈತಾಪಿ ವರ್ಗದವರಿಗೆ ವಿಶೇಷವಾದ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜದ ಶ್ರೇಯೋಭಿವೃದ್ಧಿಗಾಗಿ ತಾವು ಪಣ ತೊಡಬೇಕು. ಬರುವ ಬಜೆಟ್‌ನಲ್ಲಿ ನಮ್ಮ ಸಮಾಜವನ್ನು ಗುರುತಿಸುವ ಕೆಲಸವಾಗಬೇಕು. ಇದುವರೆಗೆ ನಮ್ಮನ್ನಾಳಿದ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ನಾವು ಕೂಡ ಅವರನ್ನು ನಿರ್ಲಕ್ಷಿಸಿದ್ದು, ತಮಗೆ ತಿಳಿದ ವಿಷಯವಾಗಿದೆ. ಈಗ ನಮ್ಮ ಸಮಾಜದ ಕಡೆ ಹೆಚ್ಚು ಗಮನ ಹರಿಸಿದರೆ ಮುಂಬರುವ ದಿನಗಳಲ್ಲಿ ನಾವು ತಮ್ಮನ್ನು ಮರೆಯುವದಿಲ್ಲ. ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ಕೋಲಿ ಸಮಾಜವನ್ನು ಆಯವ್ಯಯದಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. ಸಮಾಜದ ಬಹುದಿನದ ಬೆಡಿಕೆಯಾದ ಪರಿಶಿಷ್ಟ ಪಂಗಡಕ್ಕೆ ಸಮಾಜವನ್ನು ಸೇರ್ಪಡಿಸುವ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!