ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ಬೆಂಗಳೂರಿನಲ್ಲಿ 204 ಮಂದಿ ಜೀತಮುಕ್ತ

ಬೆಂಗಳೂರು ರಾಜ್ಯ ಸುದ್ದಿ

ಫೆಬ್ರವರಿ, 13 – ವಿವಿಧ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಹಾನಗರದ ಯಲಹಂಕದಲ್ಲಿ ಜೀತದಾಳುಗಳಾಗಿ ಇದ್ದ ಒಟ್ಟು 204 ಜನರನ್ನು ರಕ್ಷಿಸಿ ಜೀತಮುಕ್ತರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಂದಾಯ ಇಲಾಖೆ, ಡಿಎಲ್ಎಸಿ ನ್ಯಾಯಾಧೀಶರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕರ ಇಲಾಖೆ ಹಾಗೂ ಎನ್.ಜಿ‌.ಒ ಗಳು ಒಟ್ಟುಗೂಡಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಯಲಹಂಕದ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡಿಕೊಂಡಿದ್ದ ಜೀತದಾಳುಗಳನ್ನು ರಕ್ಷಿಸಲಾಗಿದೆ.

ಅನ್ಯ ರಾಜ್ಯದಿಂದ ಜನರನ್ನು ಕರೆ ತಂದು ಜೀತದಾಳುಗಳನ್ನಾಗಿ ಇರಿಸಿಕೊಂಡಿದ್ದ ಸಂಬಂಧ ಮೂವರನ್ನು ಈಗಾಗಲೇ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಮೂಲಕ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬ ಸತ್ಯಾಂಶವನ್ನು ಪೊಲೀಸರು ಹೊರ ತರಬೇಕಿದೆ.

ಈ ಬಗ್ಗೆ ಉಪ ವಿಭಾಗಾಧಿಕಾರಿ ದಯಾನಂದ್ ಭಂಡಾರಿ ಮಾತನಾಡಿ ನಿರಾಶ್ರಿತರೆಲ್ಲರೂ ಒರಿಸ್ಸಾ ಮೂಲದವರಾಗಿದ್ದು ಅವರನ್ನು ಸುರಕ್ಷಿತವಾಗಿ ವಾಪಸ್ ಅವರ ನಾಡಿಗೆ ಕಳುಹಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಗೃಹದಲ್ಲಿ ಅವರನ್ನೆಲ್ಲಾ ಇರಿಸಲಾಗಿದ್ದು ಊಟ, ತಿಂಡಿ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ಹಿನ್ನಲೆಯಲ್ಲಿ ಇಲಾಖೆಯಿಂದ ಆರು ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಲಾ 20 ಸಾವಿರ ಹಣ ನೀಡಲಾಗುವುದು. ಇದರೊಂದಿಗೆ ಅವರ ರಾಜ್ಯಕ್ಕೆ ಮರಳಲು ಅವರಿಗೆ ಸಾರಿಗೆ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!