ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಮತ್ತೆ ಜೈಲುಪಾಲಾದ ಕಳ್ಳರು

ಚಾಮರಾಜನಗರ/ಕೊಳ್ಳೇಗಾಲ ಅಪರಾಧ ಸುದ್ದಿ

ಜನವರಿ, 17 – ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಇಬ್ಬರು ಖದೀಮರು ಹಳೇ ಚಾಳಿಯನ್ನೇ ಮುಂದುವರೆಸಿ ಕಳ್ಳತನಗಳನ್ನು ಮಾಡಿ ಕೆಲವೇ ದಿನಗಳಲ್ಲಿ ಮತ್ತೆ ಜೈಲುಪಾಲಾಗಿದ್ದಾರೆ.

ಶಿವ@ಶಿವು(29) ಮತ್ತು ಶ್ರೀನಿವಾಸ@ ಸೀನ(46) ಬಂಧಿತ ಕಳ್ಳರು. ಶಿವು ಎಂಬಾತ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.‌ ಶ್ರೀನಿವಾಸ ಸಹ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜೈಲಿನಲ್ಲೇ ಇಬ್ಬರ ಪರಿಚಯವಾಗಿತ್ತು ಎನ್ನಲಾಗಿದ್ದು ಹೊರದ ನಂತರ ನಗರದ ಆದರ್ಶ ಬಡಾವಣೆ ನಿವಾಸಿ ಪಶು ವೈದ್ಯ ನಿರೀಕ್ಷಕ ಗುರುಲಿಂಗಯ್ಯ ಎಂಬುವರ ಮನೆಗೆ ಕನ್ನ ಹಾಕಿ ಚಿನ್ನದ ಒಡವೆಗಳನ್ನು ದೋಚಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಟೌನ್ ಪೊಲೀಸರು ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ತನಿಖೆ ನಡೆಸಿದಾಗ ಆರೋಪಿಗಳ ಫಿಂಗರ್ ಪ್ರಿಂಟ್ ಹೊಂದಾಣಿಕೆಯಾಗಿದೆ. ಈ ಹಿನ್ನಲೆಯಲ್ಲಿ ಟೌನ್ ಪಿಎಸ್ಐ ಜೆ.ರಾಜೇಂದ್ರ ಅವರು ಇಬ್ಬರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಬಂಧಿತರಿಂದ 60 ಗ್ರಾಂ ತೂಕದ ಚಿನ್ನದ ನೆಕ್ಲೆಸ್, ಎರಡು ಚಿನ್ನದ‌ ಬಳೆ ಹಾಗೂ ಓಲೆಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಶಿವು ಈ ಹಿಂದೆ ಕೊಳ್ಳೇಗಾಲ, ಗುಂಡ್ಲುಪೇಟೆ, ಮದ್ದೂರು, ಬಿಡದಿ, ಚನ್ನರಾಯಪಟ್ಟಣ ಸೇರದಂತೆ ಹಲವು ಕಡೆಗಳಲ್ಲಿ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಆರೋಪಿಗಳನ್ನು ಬಂಧಿಸುವಲ್ಲಿ ಕ್ರೈಂ ಬ್ರಾಂಚ್ ನ ಸಿಬ್ಬಂದಿಗಳಾದ ರಂಗಸ್ವಾಮಿ, ನಾಗೇಂದ್ರರಾಜೇಅರಸ್, ನಾಗರಾಜು, ಶಿವಕುಮಾರ್, ಶಂಕರ್, ಸವಿರಾಜು, ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದರು.

Share Post

Leave a Reply

Your email address will not be published. Required fields are marked *

error: Content is protected !!