ದೆಹಲಿ ವಿಧಾನಸಭೆ ಕದನ : ಬಿಜೆಪಿಯಿಂದ ಪೌರತ್ವ ಕಾಯ್ದೆಯ ಅಸ್ತ್ರ ಬಳಕೆ

ನವದೆಹಲಿ ರಾಜಕೀಯ

ಜ.14 – ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾರೂಢ ಆಮ್ ಅದ್ಮಿ ಪಕ್ಷ ತನ್ನ ಐದು ವರ್ಷಗಳ ಸಾಧನೆ ನೋಡಿ ಮತ ನೀಡಿ ಎಂದು ಕೇಳುತ್ತಿದ್ದರೆ, ಬಿಜೆಪಿ ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.

ಪೌರತ್ವ ಕಾಯ್ದೆಯ ಮೂಲಕ ಬಿಜೆಪಿ ಪಾಕಿಸ್ತಾನದಿಂದ ವಲಸೆ ಬಂದು ದೆಹಲಿಯಲ್ಲಿ ನೆಲೆಸಿರುವ ದೊಡ್ಡ ಪ್ರಮಾಣದ ನಿರಾಶ್ರಿತರ ಮತಗಳನ್ನು ಪಡೆದುಕೊಳ್ಳಲು ರಣತಂತ್ರ ರೂಪಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಜನವರಿ 18 ರಂದು ದೆಹಲಿಯಲ್ಲಿ ಮೆರವಣಿಗೆಯೊಂದನ್ನು ಆಯೋಜಿಸಿದೆ.

ಪಾಕಿಸ್ತಾನದಿಂದ ವಲಸೆ ಬಂದು ದೆಹಲಿಯಲ್ಲಿ ವಾಸವಾಗಿರುವ ನಿರಾಶ್ರಿತರು, ಮುಖ್ಯವಾಗಿ ಬೋವಿ ಸಮಾಜದವರು ಜಂತರ್ ಮಂತರ್ ನಿಂದ ಬಿಜೆಪಿ ಕೇಂದ್ರ ಕಚೇರಿವರೆಗೂ ಮೆರವಣಿಗೆ ಮಾಡಲಿದ್ದಾರೆ.ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.

ಅಖಿಲ ಭಾರತ ಭೋವಿ ಸಮುದಾಯದ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಡಾ.ವೆಂಕಟೇಶ ಮೌರ್ಯ ನೇತೃತ್ವದಲ್ಲಿ ಈ ಮೆರವಣಿಗೆ ನಡೆಯಲಿದೆ.

ದೆಹಲಿಯಲ್ಲಿ ದಲಿತ ಸಮುದಾಯ ಕೂಡ ಬಹಳ ನಿರ್ಣಾಯಕವಾದುದು. ಹಾಗಾಗಿಯೇ 1988ರಲ್ಲಿ ಪಾಕಿಸ್ತಾನ ಸಂಸತ್ ಗೆ ನಾಮನಿರ್ದೇಶಿತಗೊಂಡಿದ್ದ ಸಂಸದ ದಿವ್ಯರಾಮ್, ಸಿಂದ್ ಪ್ರಾಂತ್ಯದ ಮಾಜಿ ಕಾರ್ಪೊರೇಟರ್ ಅಮಿತ್ ಚಂದ್, ಸಿಎಎ ಬೆಂಬಲಿಸಿ ಅಮಿತ್ ಶಾಗೆ ಪತ್ರ ಬರೆದಿದ್ದ ಸಾಹಿಬಾ ಮತ್ತು ರಾಬೇಲಿ ಅವರನ್ನು ಮುಂದಕ್ಕೆ ಇಟ್ಟುಕೊಂಡು ಬಿಜೆಪಿ ಈ ಮೆರವಣಿಗೆಯನ್ನು ನಡೆಸುತ್ತಿದೆ.

ಬಿಜೆಪಿಯೇನೋ ಇವರನ್ನು ದೆಹಲಿ ವಿಧಾನಸಭಾ ಚುನಾವಣೆಗೆ ಬಳಸಿಕೊಳ್ಳಲು ನೋಡುತ್ತಿದೆ. ಇನ್ನೊಂದೆಡೆ ಈ ನಿರಾಶ್ರಿತರು ತಾವು ಸದ್ಯ ವಾಸವಾಗಿರುವ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಡಬೇಕು, ಪ್ರತಿ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಕೊಡಬೇಕು ಹಾಗೂ ಹಣಕಾಸಿನ ನೆರವು ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಎಂಬುದನ್ನು ಕಾದುನೋಡಬೇಕು.

Share Post

Leave a Reply

error: Content is protected !!