ರಸ್ತೆ ಸಮಸ್ಯೆ ಪರಿಹಾರಕ್ಕೆ ಮನವಿ : ಸ್ಥಳಕ್ಕೆ ಶಾಸಕ ಎನ್.ಮಹೇಶ್‌ ಭೇಟಿ

ಚಾಮರಾಜನಗರ/ಕೊಳ್ಳೇಗಾಲ ಸುದ್ದಿ

ಜ.14 – ತಿರುಗಾಡಲು ರಸ್ತೆಯಿಲ್ಲದ ಸಮಸ್ಯೆಯ ಕುರಿತು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಖುದ್ದು ಸ್ಥಳಕ್ಕೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.

ನಗರದ ಬಸ್ತಿಪುರ ರಸ್ತೆಯ ರಾಜೀವ್ ನಗರದ ಐದನೇ ಕ್ರಾಸ್‌ನಲ್ಲಿ ಹಲವು ಮನೆಗಳಿಗೆ ಹಿಂದಿನಿಂದಲೂ ತಿರುಗಾಡಲು ಯಾವುದೇ ರಸ್ತೆ ಇಲ್ಲದಾಗಿದ್ದು ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧ ಪಟ್ಟವರಿಗೆ ಮನವಿಗಳನ್ನು ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಥಳೀಯರು ಸಮಸ್ಯೆಯ ಕುರಿತು ಶಾಸಕರಿಗೆ ತಿಳಿಸಿದ ಸಂದರ್ಭದಲ್ಲಿ ಖುದ್ದು ಶಾಸಕರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಪ್ರದೇಶದ ಸುತ್ತಮುತ್ತಲು ವಿಷಜಂತುಗಳ ಕಾಟ ವಿಪರೀತವಾಗಿದೆ. ಸುರಕ್ಷತೆ ಇಲ್ಲದಂತಾಗಿದೆ. ಇತ್ತೀಚೆಗೆ ಕಳ್ಳತನಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಶಾಸಕರ ಎದುರು ಆತಂಕ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣಕ್ಕೆ ಖಾಲಿ ನಿವೇಶನಗಳ ಮಾಲಿಕರೊಂದಿಗೆ ಮಾತುಕತೆ ನಡೆಸಿ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿ ಎಂದು ನಗರಸಭೆ ಪೌರಾಯುಕ್ತ ನಾಗಶೆಟ್ಟಿ ಅವರಿಗೆ ಶಾಸಕರು ತಾಕೀತು ಮಾಡಿದರು. ಮಾಲಿಕರು ಒಪ್ಪದಿದ್ದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಕಾನೂನು ಕ್ರಮ ಕೈಗೊಳ್ಳಿ ಎಂದು ಅವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸೆಲ್ವರಾಜು ಹಾಗೂ ಶಾಂತರಾಜು, ವಾರ್ಡ್ ಸದಸ್ಯೆ ಸುಮಾಸುಬ್ಬಣ್ಣ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಜಿ ಸಮೀಉಲ್ಲಾ, ನಗರಸಭೆ ಜೆಇ ನಾಗೇಂದ್ರ ಇದ್ದರು.

Share Post

Leave a Reply

Your email address will not be published. Required fields are marked *

error: Content is protected !!