ಮಂಡ್ಯ ಯುನಿವರ್ಸಿಟಿ ಮಾನ್ಯತೆ ವಾಪಸ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಮಂಡ್ಯ ಜಿಲ್ಲಾ ಸುದ್ದಿ

ಜ.13 – ಮಂಡ್ಯ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ವಾಪಸ್ ಪಡೆದು ಅಟೊನಾಮಸ್ ಆಗಿ ಮುಂದುವರೆಸುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಇದೀಗ ದದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರದ ಆದೇಶದ ವಿರುದ್ಧ ಪ್ರತಿಭನೆ ನಡೆಸಿದ ವಿದ್ಯಾರ್ಥಿಗಳು ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆ ಗೆದ್ದ ಸಂಸದೆ ಸುಮಲತಾ ವಿರುದ್ದವೂ ಘೋಷಣೆಗಳನ್ನು ಕೂಗಿದರು. ಅಲ್ಲದೆ ಚಿತ್ರನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಸಹ ಆಕ್ರೋಶ ಹೊರ ಹಾಕಿದರು.

ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಮಂಡ್ಯದ ಸ್ವಾಯತ್ತ ಸರ್ಕಾರಿ ಕಾಲೇಜನ್ನು ಮಂಡ್ಯ ವಿವಿಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಇದೀಗ ಅದನ್ನು ವಾಪಸ್ ಪಡೆದಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ಕಳೆದ ನಾಲ್ಕೈದು ದಿನಗಳಿಂದ ಹೋರಾಟ ಮಾಡ್ತಿದ್ದಾರೆ. ವಿದ್ಯಾರ್ಥಿಗಳ ಹೋರಾಟ ಇಂದು ವೇಗ ಪಡೆದುಕೊಂಡಿತ್ತು.

ಕಾಲೇಜಿನ ಮುಂದೆ ಪ್ರೊಟೆಸ್ಟ್ ನಡೆಸಿ, ಡಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದ್ರಲ್ಲೂ ಸ್ವಾಭಿಮಾನದ ಹೆಸ್ರಲ್ಲಿ ಚುನಾವಣೆ ಗೆದ್ದ ಸಂಸದೆ ಸುಮಲತಾ, ಸುಮಲತಾ ಪರ ಬೆನ್ನಿಗೆ ನಿಂತು ನಿಮ್ಮ ಪರ ನಾವಿರ್ತೇವೆ ಎಂದಿದ್ದ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಅವಧಿಗೆ ವಿವಿ ಹೆಸ್ರಲ್ಲಿ ಮತ್ತೊಂದು ಅವಧಿಗೆ ಸ್ವಾಯತ್ತ ಕಾಲೇಜು ಹೆಸ್ರಲ್ಲಿ ಪರೀಕ್ಷೆ ಬರೆದ್ರೆ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ವಿವಿ ಉಳಿಸಿಕೊಳ್ಳಲು ಹೋರಾಟ ನಡೆಸ್ತಿರೋ ವಿದ್ಯಾರ್ಥಿಗಳಿಗೆ, ಉಪನ್ಯಾಸಕರು ಪೊಲೀಸರನ್ನು ಕರೆಯಿಸಿ ದೌರ್ಜನ್ಯ ನಡೆಸ್ತಿದ್ದಾರೆಂದು ವಿದ್ಯಾರ್ಥಿಗಳೇ ಸ್ವತಃ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ನಮ್ಮ ಜೊತೆ ಜನಪ್ರತಿನಿಧಿಗಳು ಕೈ ಜೋಡಿಸಿ ವಿವಿ ಉಳಿಸಿಕೊಳ್ಳದಿದ್ದರೆ ಮಂಡ್ಯ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳ ಜೊತೆಗೂಡಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ಕೊಟ್ಟಿದ್ದು, ಕಾಲೇಜಿನ ಪ್ರಾಂಶುಪಾಲರು ಮಾತ್ರ ವಿದ್ಯಾರ್ಥಿಗಳ ಮೇಲೆ ಯಾವುದೇ ದೌರ್ಜನ್ಯ ನಡೆಸಿಲ್ಲ ಜೊತೆಗೆ ಅವರ ಪ್ರತಿ ಹೋರಾಟ ಮತ್ತು ಮನವಿಯನ್ನು ಸಂಬಂಧಪಟ್ಟವರಿಗೆ ತಲುಪಿಸುತ್ತಿದ್ದೇನೆ ಎಂದರು.

ಒಟ್ಟಾರೆ ಮಂಡ್ಯ ವಿವಿಗಾಗಿ ವಿದ್ಯಾರ್ಥಿಗಳ ಹೋರಾಟ ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಮಂಡ್ಯ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ವಿವಿಯನ್ನು ಉಳಿಸಿಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

– ಬಲ್ಲೇನಹಳ್ಳಿ ಸಂತೋಷ್ ದಿ ನ್ಯೂಸ್24 ಕನ್ನಡ, ಮಂಡ್ಯ

Share Post

Leave a Reply

Your email address will not be published. Required fields are marked *

error: Content is protected !!