ವಿದೇಶಗಳಿಂದ ಮಾದಕ ವಸ್ತು ಆಮದು : ನಾಲ್ವರು ಸರ್ಕಾರಿ ನೌಕರರ‌ ಬಂಧನ

ಬೆಂಗಳೂರು ಅಪರಾಧ ಸುದ್ದಿ

ಡಿ.30 – ಅಂಚೆಯ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು ದಂಧೆ ನಡೆಸುತ್ತಿದ್ದ ನಾಲ್ವರು ಸರ್ಕಾರಿ ನೌಕರರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಚ್.ಸುಬ್ಬು(34), ರಮೇಶ್‌ಕುಮಾರ್(47), ಸಯ್ಯದ್ ಮಾಜಿದ್(54) ಹಾಗೂ ವಿಜಯರಾಜನ್(58) ಬಂಧಿತ ಆರೋಪಿಗಳು. ಇವರೆಲ್ಲರೂ ಚಾಮರಾಜಪೇಟೆ ವಿಭಾಗದ ಅಂಚೆ ಕಛೇರಿಯ ನೌಕರರಾಗಿದ್ದಾರೆ. ಇವರಿಂದ ಸುಮಾರು 20 ಲಕ್ಷ ಮೌಲ್ಯದ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

339 ಎಕ್ಸ್‌ಟೆಸಿ (Ecstasy) ಮಾತ್ರೆಗಳು, 10 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 30 ಗ್ರಾಂ ತೂಕದ ಬ್ರೌನ್ ಶುಗರ್ ಹಾಗೂ ವಿದೇಶಗಳಿಂದ ಬಂದಿದ್ದ ಪೋಸ್ಟ್ ಕವರ್‌‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ವಿದೇಶಗಳಿಂದ ಬರುವ ಪೋಸ್ಟ್ ಕವರ್‌‌ ಹಾಗೂ ಪಾರ್ಸಲ್‌ಗಳನ್ನು ಪರಿಶೀಲಿಸುವ ಹುದ್ದೆಯಲ್ಲಿದ್ದರು. ವಿಶೇಷವಾಗಿ ನೆದರ್‌ಲ್ಯಾಂಡ್ಸ್, ಡೆನ್ಮಾರ್ಕ್ ಹಾಊ ಯುಎಸ್ಎ ದೇಶಗಳಿಂದ ಬರುವ ಸಾಮಾನ್ಯ ಪೋಸ್ಟ್‌ಕವರ್ ಹಾಗೂ ಪಾರ್ಸೆಲ್‌ಗಳನ್ನು ಪರಿಶೀಲಿಸಿ, ಮಾದಕ ವಸ್ತುಗಳು ಇರುವುದನ್ನು ಖಚಿತ ಪಡಿಸಿಕೊಂಡು ಅವುಗಳನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಹಂಚಿಕೊಳ್ಳುವ ಪ್ರವೃತ್ತಿ ರೂಢಿಸಿಕೊಂಡಿದ್ದರು. ಇದೀಗ ಆರೋಪಿಗಳ ಅಕ್ರಮ ಬಯಲಾಗಿದ್ದು ಪೊಲೀಸರು ಕೋಳ ತೊಡಿಸಿದ್ದಾರೆ.

ಬಂಧಿತರ ವಿರುದ್ಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!