ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಮಳ್ಳೂರಾಂಭ ದೇವಿ ಜಾತ್ರೆ

ಶಿಡ್ಲಘಟ್ಟ : ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಪುರಾಣ ಪ್ರಸಿದ್ಧ ಐತಿಹಾಸಿಕ ಮಳ್ಳೂರಾಂಭ ದೇವಿಯ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಿದರು.

ತಾಲ್ಲೂಕಿನಲ್ಲಿ ದೇವರುಗಳ ತವರೂರು ಎಂದು ಪ್ರಖ್ಯಾತಿ ಹೊಂದಿರುವ ದೇವಿಯ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿ, ಸಡಗರ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ನೆರವೇರಿಸಲಾಯಿತು.

ಜಾತ್ರೆಯ ಅಂಗವಾಗಿ ಗ್ರಾಮದಲ್ಲಿನ ವಿವಿಧ ದೇವಾಲಯಗಳಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.


ಶ್ರೀ ಮಳ್ಳೂರಾಂಬ ದೇವಿಯ ಬ್ರಹ್ಮರಥೋತ್ಸವದಲ್ಲಿ ಪುರೋಹಿತರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ದೇವರ ಮೂರ್ತಿಯನ್ನು ಪುಷ್ಪ ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಬ್ರಹ್ಮರಥೋತ್ಸವಕ್ಕೆ ಶಾಸಕರು ಮತ್ತು ಮಾಜಿ ಸಚಿವ ಸನ್ಮಾನ್ಯ ವಿ.ಮುನಿಯಪ್ಪನವರು ಹಾಗೂ ತಹಶೀಲ್ದಾರ್ ಎಂ.ದಯಾನಂದ್ ನವರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಮಳ್ಳೂರಾಂಭದೇವಿಯ ಬ್ರಹ್ಮರಥೋತ್ಸವದಲ್ಲಿ ತಾಲೂಕಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಿ ದೇವರ ಕೃಪೆಗೆ ಪಾತ್ರರಾದರು.

ಭಕ್ತರು ಪುಷ್ಪಾಲಂಕೃತಗೊಂಡಿದ್ದ ತೇರನ್ನು ಎಳೆಯುವುದರ ಜತೆಗೆ ಬಾಳೆಹಣ್ಣು ಎಸೆದು ಹಣ್ಣುಕಾಯಿ ಕೊಟ್ಟು ಭಕ್ತಿ ಸಮರ್ಪಿಸಿದರು.

ಬ್ರಹ್ಮರಥೋತ್ಸವಕ್ಕೆ ಕೀಲು ಕುದುರೆ, ವೀರಗಾಸೆ, ತಮಟೆ, ಮಂಗಳವಾದ್ಯಗಳು ಮೆರುಗು ನೀಡಿದ್ದು ಬೊಂಡಾ, ಕಡಲೆಪುರಿ, ಮಕ್ಕಳ ಆಟಿಕೆಗಳು, ದಿನ ಬಳಕೆ ಪಾತ್ರೆ ಸಾಮಾನುಗಳು ಹಾಗೂ ಇನ್ನೂ ಮುಂತಾದ ವಸ್ತುಗಳ ಮಳಿಗೆಗಳು ಜನರ ಗಮನ ಸೆಳೆಯಿತು. ರಥೋತ್ಸವದ ಹಿನ್ನಲೆಯಲ್ಲಿ ಊರಿನ ಮನೆ ಮನೆಯಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು.

ಕಾರ್ಯಕ್ರಮದಲ್ಲಿ ಪಂಕಜ್ ನಿರಂಜನ್, ಶ್ರೀನಿವಾಸ್, ಮುಳ್ಳೂರಯ್ಯ, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಗ್ರಾಮಾಂತರ ಎಸ್.ಐ ಹರೀಶ್ ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.

  • ನಾಗಭೂಷಣ್ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!