ಕಬ್ಬು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದ “ಸೂಲಂಗಿ”

ಕಾಗವಾಡ : ರೈತರಿಗೆ ಮೇಲಿಂದ ಮೇಲೆ ಕಷ್ಟಗಳು ಎದುರಾಗತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಮತ್ತೊಂದು ಬರೆ ಎಳೆಯುವ ಪ್ರಸಂಗ ಇದೀಗ ಎದುರಾಗಿದ್ದು ಕಬ್ಬು ಬೆಳೆಗಾರರು ಆಂತಕ ಪಡುವಂತಾಗಿದೆ.

ಹೌದು, ಅತಿವೃಷ್ಟಿ, ನೆರೆ ಹಾವಳಿಯಿಂದ ಅಳಿದುಳಿದ ಕಬ್ಬಿನ ಬೆಳೆಗೆ ಈಗ “ಸೂಲಂಗಿ” ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸೂಲಂಗಿ ಸಮಸ್ಯೆ

ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಆದರೆ ಈ ಬಾರಿ 5 ರಿಂದ 10 ತಿಂಗಳ ಅವಧಿಯಲ್ಲೇ ಸೂಲಂಗಿ ಮೂಡಿದೆ. ಸೂಲಂಗಿ ಕಾಣಿಸಿಕೊಳ್ಳಾರಂಭಿಸಿದರೆ ಆದಷ್ಟು ಬೇಗ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು. ತಡ ಮಾಡಿದಷ್ಟೂ ಕಬ್ಬು ಬೆಂಡೊಡೆಯಲಾರಂಭಿಸುತ್ತದೆ.

ಒಂದು ಎಕರೆಗೆ 35 ರಿಂದ 40 ಟನ್ ಕಬ್ಬಿನ ಫಸಲು ಸಿಗುತ್ತಿದ್ದರೆ ಸೂಲಂಗಿ ಬಂದಾಗ 24 ರಿಂದ 28 ಟನ್ ಮಾತ್ರ ಸಿಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮಳೆ, ನೆರೆಯಿಂದ ಈ ಬಾರಿ ಶೇ.40% ರಷ್ಟು ಕಬ್ಬು ಬೆಳೆ ನಾಶವಾಗಿದ್ದು, ಉಳಿದ ಕಬ್ಬಿನ ಬೆಳೆಗೆ ಕಬ್ಬು ಕಟಾವು ಮಾಡುವ ಮೊದಲೇ ಸೂಲಂಗಿ ಕಾಣಿಸಿಕೊಂಡಿದೆ.

ಸೂಲಂಗಿ ಕಬ್ಬು ಕಟಾವಿಗೆ ಕಾರ್ಮಿಕರು ಹೆಚ್ಚಿನ ದರ ಬೇಡುತ್ತಾರೆ. ಅಲ್ಲದೇ ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಇದು ಕೂಡ ರೈತರ ಆರ್ಥಿಕ ಹಾನಿ ಹೆಚ್ಚಿಸುತ್ತದೆ. ಸೂಲಂಗಿ ಕಬ್ಬಿಗೆ ಬೆಂಕಿ ತಗುಲಿದರೆ ಧಗಧಗ ಉರಿಯುತ್ತದೆ. ಜನವರಿಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಕಬ್ಬಿಗೆ ಬೆಂಕಿ ತಗುಲುವ ಸಾಧ್ಯತೆಯೂ ಹೆಚ್ಚಾಗಿದೆ.

ವಿಶೇಷವಾಗಿ ಅಡಸಾಲಿ(ಮುಂಚಿತವಾಗಿ) ನಾಟಿ ಮಾಡಿದ ಕಬ್ಬಿಗೆ ಡಿಸೆಂಬರ್ ಅಂತ್ಯದೊಳಗೆ ಹೂ ಕಾಣಿಸಿಕೊಳ್ಳುವುದು ಸಾಮಾನ್ಯ ಆದರೆ ಈ ವರ್ಷ ಅಡಸಾಲಿ ಮತ್ತು ಇಕ್ಕಸಾಲಿ (ನಂತರದ ಅವಧಿಯಲ್ಲಿ) ನಾಟಿ ಮಾಡಿದ ಕಬ್ಬಿನಲ್ಲೂ ಹೂ ಕಾಣಿಸಿಕೊಂಡಿದೆ. ಕುಳೆ ಕಬ್ಬಲ್ಲೂ ಈ ಬಾರಿ ಡಿಸೆಂಬರ್‌ನಲ್ಲೆ ಹೂ ಬಿಟ್ಟರುವದು ರೈತರ ಆತಂಕಕ್ಕೆ ಕಾರಣವಾಗಿದೆ.

  • ಸಚೀನ ಕಾಂಬಳೆ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!