ಮೆಟ್ರೋ ಸಿಟಿಯಲ್ಲಿ ಕ್ರಿಸ್‌ಮಸ್, ನ್ಯೂ ಇಯರ್ ಕೇಕ್‌ ಸಂಭ್ರಮ

ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಕೇಕ್ ಗಳು ವೆಲ್ ಕಮ್ ಕೊಡಲು ಸಜ್ಜಾಗುತ್ತೆ. ಅದರಲ್ಲೂ ಕೇಕ್ ಪ್ರಿಯರಿಗಾಗಿ ಮತ್ತಷ್ಟು ರುಚಿ ‌ಈಡಲು ಕೇಕ್ ಶೋ ಪ್ರಾರಂಭವಾಗಿದೆ. ಈ ಕೇಕ್ ಶೋ ಕುರಿತ ವಿಶೇಷ ವರದಿ ಮುಂದೆ ಓದಿ.

ಪ್ರಕೃತಿಯ ವಿವಿಧ ವಿನ್ಯಾಸಗಳ ಕಣ್ಣು ಕುಕ್ಕುವ ಕಲಾಕೃತಿಯುಳ್ಳ ಕೇಕ್‌ಗಳು ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಲಗ್ಗೆ ಇಟ್ಟಿವೆ. ನೋಡುತ್ತಿದ್ದರೆ ನೋಡುತ್ತಲೇ ಮೈಮರೆಯುವ ಚೆಂದ ಚೆಂದದ ಕೇಕ್‌ಗಳು ನಿಮ್ಮ ಮನಸ್ಸನ್ನು ಅರಳಿಸುತ್ತವೆ.

ಹೌದು, ಸಿಲಿಕಾನ್ ಸಿಟಿಯ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗೌಂಡ್‌ನಲ್ಲಿ ನೈಜಕ್ಕೆ ಹತ್ತಿರವಾಗಿರೋ ಬಗೆಬಗೆಯ ವಿನ್ಯಾಸಗಳ ಕೇಕ್ ಲೋಕ ಧರೆಗಿಳಿದಿದೆ.

ಇಲ್ಲಿ ಡಿಸೆಂಬರ್ 13 ರ ಶುಕ್ರವಾರದಿಂದ ಜನವರಿ 1 ರ ವರೆಗೆ ಭಾರತದ ಅತೀ ದೊಡ್ಡ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ನ ಸುಮಾರು 60 ಕ್ಕೂ ಹೆಚ್ಚು ನಳಪಾಕ ಪ್ರವೀಣರು ವಿವಿಧ ಡಿಸೈನ್‌ಗಳ ಕೇಕ್‌ಗಳನ್ನು ತಯಾರಿಸಿ ಪ್ರದರ್ಶನಕದಕ್ಕಿಟ್ಟಿದ್ದಾರೆ.

ಈ ಬಾರಿ ನಡೆಯುತ್ತಿರುವ 45 ನೇ ವರ್ಷದ ಕೇಕ್ ಶೋನಲ್ಲಿ 16 ನೇ ಶತಮಾನದ ಸೈಂಟ್ ಬಾಸಿಲ್ ಕ್ಯಾಥೆಡ್ರಾಲ್ ಚರ್ಚ್ ರೀತಿಯ ವಿನ್ಯಾಸವುಳ್ಳ ಕೇಕ್ ಈ ಬಾರಿಯ ಅತ್ಯಂತ ಆಕರ್ಷಣೀಯ ಕೇಕ್ ಎನ್ನಬಹುದಾಗಿದೆ.

ಇದು ಸುಮಾರು 20 ಅಡಿ ಅಗಲ ಹಾಗೂ 16 ಅಡಿ ಉದ್ದವಿದ್ದು ಇದನ್ನು 120 ದಿನಗಳಲ್ಲಿ 5 ಜನರ ತಂಡ ವಿನ್ಯಾಸಗೊಳಿಸಿದೆ. ವಿವಿಧ ಪ್ರಾಣಿಗಳ ವಿನ್ಯಾಸದ ಕೇಕ್‌ಗಳು ಸಹ ನೋಡುಗರ ಕಣ್ಮನ ಸೆಳೆಯುತ್ತಿವೆ.

ಕೇವಲ ಚರ್ಚ್ ಹಾಗೂ ಪ್ರಾಣಿಗಳ ವಿನ್ಯಾಸದ ಕೇಕ್‌ಗಳಷ್ಟೇ ಅಲ್ಲದೇ ಹಿಂದೂ ದೇವರ ವಿನ್ಯಾಸದ ಕೇಕ್‌ಗಳು ಸಹ ಇಲ್ಲಿವೆ. ಕೊಳಲು ಹಿಡಿದ ಕೃಷ್ಣ, ನಾಗರಾಣಿ, ಮುದ್ದಾಗಿ ಕಾಣುವ ಆನೆ‌ ಮತ್ತು ಮರಿಗಳು, ಕ್ಯೂಟ್ ಆಗಿ ಕಾಣೋ ಆನೆ ಮರಿಗಳು, ಮದುವೆಯ ಉಂಗುರ, ಹಾಲೊವೀನ್ ಪಿಲ್ಲರ್, ಚಂದ್ರಯಾನ-2, ಕಥಕ್ಕಳಿ ನೃತ್ಯಗಾರ್ತಿ ಯ ವಿನ್ಯಾಸದ ಕೇಕ್‌ಗಳು ಹೀಗೆ ಹಲವಾರು ಬಗೆಯ ಕೇಕ್‌ಗಳು ಹವಾ ಸೃಷ್ಟಿಸಿವೆ.

ಒಟ್ಟಾರೆ ಕ್ರಿಸ್‌ಮಸ್ ಸಡಗರ ಸಿಲಿಕಾನ್ ಸಿಟಿಯಲ್ಲಿ ಎರಡು ವಾರಗಳ ಮುಂಚೆಯೇ ಆರಂಭವಾಗಿದೆ. ದೇಶದ ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ವಿದೇಶಿ ಕಟ್ಟಡಗಳ ವಿನ್ಯಾಸದ ಕೇಕ್‌ಗಳು ತಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿವೆ.

ಇಷ್ಟೇ ಅಲ್ಲದೇ ಮಕ್ಕಳನ್ನು ಆಕರ್ಷಿಸಲು ಸಹ ಅನೇಕ ಮಾದರಿಯ ಗೊಂಬೆಗಳ ಕೇಕ್‌ಗಳು ತಯಾರಾಗಿದ್ದು ಈ ಬಾರಿ ಕೇಕ್‌ ಶೋ ಹಿಂದೆಂದಿಗಿಂತಲೂ ಭಿನ್ನವಾಗಿವೆ. ಒಂದು ಚೆಂದದ ಅನುಭವ ಪಡೆಯಲು ಕೇಕ್ ಪ್ರದರ್ಶನಕ್ಕೆ ಭೇಟಿ ನೀಡಿ.

Share Post

Leave a Reply

Your email address will not be published. Required fields are marked *

error: Content is protected !!