ಅಕ್ರಮ ಗಣಿಗಾರಿಕೆ ಕ್ವಾರಿಯನ್ನು ತ್ಯಾಜ್ಯದಿಂದ ಮುಚ್ಚಿ ಹಾಕಿದ ದಂಧೆಕೋರರು

ಕೋಲಾರ : ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಬೃಹತ್ ಕ್ವಾರಿ ಕಾಣದಂತೆ ಮಾಡುವ ಉದ್ದೇಶದಿಂದ ನಗರಸಭೆಯ ಅಪಾರ ತ್ಯಾಜ್ಯ ತುಂಬುತ್ತಿದ್ದದ್ದನ್ನು ಸ್ಥಳೀಯರು ತಡೆದಿದ್ದಾರೆ. ಬಳಿಕ ಏನು ಮಾಡಿದ್ರು ಅಂತೀರಾ ಈ ವರದಿ ಓದಿ.

ನೂರಾರು ಕೋಟಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ ದಂಧೆಕೋರರು ನಗರಸಭೆಗಳಲ್ಲಿ ಉತ್ಪತ್ತಿಯಾಗುವ ಸಾವಿರಾರು ಟನ್​ ಕಸವನ್ನು ಕ್ವಾರಿಗೆ ಹಾಕಲು ತುಂಬಿಕೊಂಡು ಹೋಗುತ್ತಿದ್ದನ್ನು ತಡೆದ ಸಾರ್ವಜನಿಕರು ಪ್ರತಿಭಟಿಸಿದ್ದರು.

ಹೌದು ಹೀಗೆ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆ ಮಧ್ಯೆ ಕಸ ಸುರಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು. ಮತ್ತೊಂದು ಕಡೆ ಅಕ್ರಮ ಕಲ್ಲುಗಣಿಗಾರಿಕೆ ನಡೆದ ಕ್ವಾರಿಗೆ ಕಸ ಸುರಿಯಲು ಬಿಡುವುದಿಲ್ಲ ಎಂದು ವಾಹನಗಳ ಚಕ್ರದ ಗಾಳಿ ಬಿಡುತ್ತಿರುವ ಜನ್ರು. ಇನ್ನು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲೂಕಿನ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಲಕ್ಷ್ಮೀಸಾಗರ ಕೆರೆಯ ಬಳಿ.

ಹೊಸಕೋಟೆ, ಕೋಲಾರ ನಗರಸಭೆಯ ತ್ಯಾಜ್ಯವನ್ನು ಲಕ್ಷ್ಮೀಸಾಗರ ಕೆರೆಯ ಸಮೀಪ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ ಕಲ್ಲು ಕ್ವಾರಿಗೆ ಕಳೆದ ಒಂದು ತಿಂಗಳಿಂದ ಸುರಿಯಲಾಗಿತ್ತು. ಇದನ್ನು ವಿರೋಧಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ವಾಹನಗಳಲ್ಲಿ ಕಸವನ್ನು ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ರಾಮಸಂದ್ರ ಗೇಟ್​ಬಳಿ ಕಸ ಸುರಿದು ಬೆಂಕಿ ಹಾಕಿ ಪ್ರತಿಭಟನೆ ನಡೆಸಿದರು.

ಕ್ವಾರಿ ಸುತ್ತಲು ರೈತರ ಕೃಷಿಭೂಮಿ ಹಾಗೂ ಸಮೀಪದಲ್ಲೇ ಗ್ರಾಮಗಳು ಇದ್ದು ತ್ಯಾಜ್ಯ ಸುರಿಯತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡು ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ತ್ಯಾಜ್ಯ ವಾಹನಗಳನ್ನು ಹೆದ್ದಾರಿಗೆ ತಂದು ರಸ್ತೆಯ ಮಧ್ಯದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದ್ರು. ಇನ್ನು ಹೊಸಕೋಟೆ ನಗರಸಭೆ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಜನ್ರು ಕೊಡಲೇ ಸಂಬಂಧಪಟ್ಟ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಗೋಮಾಳ ಜಮೀನಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಂಚಿಸಿದ ಲಕ್ಷ್ಮೀಸಾಗರ ಗ್ರಾಮದ ಚಂದ್ರಪ್ಪ ಎಂಬ ದಂಧೆಕೋರರ ಕುಟುಂಬ ಕಳೆದ ಹಲವು ವರ್ಷಗಳಿಂದ ನೂರಾರು ಕೋಟಿ ಬೆಲೆಬಾಳು ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ್ದಾರೆ. ಇತ್ತೀಚೆಗೆ ರೈತ ಸಂಘದ ಮುಖಂಡರು ಜಿಲಾಧಿಕಾರಿಗೆ ಈ ಬಗ್ಗೆ ದೂರು ನೀಡುತ್ತಿದ್ದಂತೆ ಪ್ರಕರಣವನ್ನು ಮುಚ್ಚಿಹಾಕಲು ಬೃಹತ್​ ಹೊಂಡ ಬಿದ್ದ ಕಲ್ಲುಕ್ವಾರಿಗೆ ಹೊಸಕೋಟೆ, ಕೋಲಾರ ನಗರಸಭೆ, ಎಪಿಎಂಸಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ, ಸತ್ತ ಪ್ರಾಣಿಗಳ ಶವಗಳು, ಆಸ್ಪತ್ರೆ ತ್ಯಾಜ್ಯವನ್ನು ಹಾಕಿ ಬೃಹತ್​ ಹೊಂಡವನ್ನು ಮುಚ್ಚಲು ಪ್ರಯತ್ನ ಪಡುತ್ತಿದ್ದಾರೆ.

ಇಂದು ಸ್ಥಳೀಯ ಗ್ರಾಮಸ್ಥರು, ರೈತ ಸಂಘದ ಮುಖಂಡರು ಕ್ವಾರಿ ಬಳಿ ಕಾದುಕುಳಿತು ಹೊಸಕೋಟೆ ನಗರಸಭೆಗೆ ಸೇರಿದ ಮೂರು ಕಸದ ವಾಹನಗಳನ್ನು ತಡೆದು ನಂತ್ರ ಹೆದ್ದಾರಿಗೆ ಕರೆತಂದು ರಸ್ತೆಯ ಮಧ್ಯದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದ್ರು. ಇನ್ನು ಈ ವೇಳೆ ಮಾತನಾಡಿದ ರೈತ ಮುಖಂಡ ನಾರಾಯಣಸ್ವಾಮಿ ಅಕ್ರಮ ಕಲ್ಲುಗಣಿಗಾರಿಕೆ ನಡೆದ ಸ್ಥಳದಲ್ಲಿ ಕಸ ತುಂಬಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಕಸ ಸುರಿಯಲು ಸಹಾಯಮಾಡಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವೇಮಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರು.

ಒಟ್ಟಾರೆ ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿ ಅದೇ ಜಾಗದಲ್ಲಿ ಕಸ ತುಂಬಿ ಮಣ್ಣು ಹಾಕಿದ್ರೆ ನಾವು ಮಾಡಿದ ಅಕ್ರಮ ಯಾರಿಗೂ ತಿಳಿಯಲ್ಲ ಎಂದು ಕಸ ತುಂಬಿಸಿ ಸುತ್ತಮುತ್ತ ಜನರಿಗೆ ಮಾರಕ ಕಾಯಿಲೆಗಳನ್ನ ತಂದೊಡ್ಡಿರುವುದಂತೂ ನಿಜ. ಇನ್ನು ಅಕ್ರಮವಾಗಿ ಕಲ್ಲುಗಣಿಗಾರಿಕೆ ಹಾಗೂ ಕಸ ಹಾಕಿದ ದಂಧೆಕೋರರು ಮತ್ತು ಇವರಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು.

Share Post

Leave a Reply

Your email address will not be published. Required fields are marked *

error: Content is protected !!