ಶಾಸಕ ಸಿದ್ದು ಸವದಿ ನಿವಾಸದೆದುರು ಜೈನ ಮುನಿ ಸತ್ಯಾಗ್ರಹ

ಬಾಗಲಕೋಟೆ : ಪುನರ್ ವಸತಿ ಕೇಂದ್ರ ಸ್ಥಾಪನೆ ಖಂಡಿಸಿ ತೇರದಾಳ ಶಾಸಕ ಸಿದ್ದು ಸವದಿ ಅವರ ಬನಹಟ್ಟಿ ನಿವಾಸದ ಎದುರು ಹಳಂಗಳಿಯ ಭದ್ರಗಿರಿ ಬೆಟ್ಟದ ಕುಲರತ್ನ ಭೂಷಣ ಮಹಾರಾಜರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹಳಂಗಳಿ ಭದ್ರಗಿರಿ ಬೆಟ್ಟ ಇದೆ. ಇಲ್ಲಿನ ಕಂದಾಯ ಇಲಾಖೆ ಭೂಮಿಯ 83.30 ಎಕರೆ ಜಾಗದಲ್ಲಿ ಪುನರ್ ವಸತಿ ಕೇಂದ್ರ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಮುನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಪುನರ್ ವಸತಿ ಕೇಂದ್ರ ಸ್ಥಾಪನೆಗೆ ಗುರುತಿಸಿರುವ ಸ್ಥಳದಲ್ಲಿ ಲಕ್ಷಾಂತರ ಗಿಡಗಳನ್ನು ನೆಡಲಾಗಿದೆ. ಅಷ್ಟೇ ಅಲ್ಲ, ಈ ಜಾಗದಲ್ಲಿ ಜೈನರ 603 ಗುಂಪಾಗಳು ಇರುವುದು ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಕಂದಾಯ ಇಲಾಖೆಗೆ ಸೇರಿದ 336 ಎಕರೆ ಜಮೀನು ಇದ್ದು, ಈ ಪೈಕಿ ಜೈನ ಗುಂಪಾಗಳು ಇರುವ 83.30 ಎಕರೆ ಜಮೀನು ಭದ್ರಗಿರಿ ಬೆಟ್ಟಕ್ಕೆ ಕೊಡಬೇಕು ಎಂದು ಕುಲರತ್ನ ಭೂಷಣ ಮಹಾರಾಜರು 2013ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಅವರು ಜಾಗ ಕೊಡುವ ಭರವಸೆ ನೀಡಿದ್ರು ಎನ್ನುವುದು ಶ್ರೀಗಳ ವಾದ.

ಪ್ರಸ್ತುತ ಆ ಪ್ರದೇಶದಲ್ಲಿ ತಮದಡ್ಡಿ ಗ್ರಾಮಕ್ಕೆ ಪುನರ್ ವಸತಿ ಕೇಂದ್ರ ಮಾಡಲು ಸರ್ಕಾರ ಮುಂದಾಗಿದೆ. 83.30 ಎಕರೆ ಜಾಗ ಬಿಟ್ಟು ಕಂದಾಯ ಇಲಾಖೆಯ ಇತರೆ ಜಾಗದಲ್ಲಿ ಪುನರ್ ವಸತಿ ಕಲ್ಪಿಸಿ ಎಂದು ಶ್ರೀಗಳು ಆಗ್ರಹಿಸುತ್ತಿದ್ದು, ಬೇಡಿಕೆ ಈಡೇರುವರೆಗೂ ಶಾಸಕರ ಮನೆ ಮುಂದೆ ಆಮರಣಾಂತ ಉಪವಾಸ ಮಾಡಲು ಶ್ರೀಗಳು ನಿರ್ಧಾರ ಮಾಡಿದ್ದಾರೆ.

ಸ್ಥಳಕ್ಕೆ ಜಮಖಂಡಿ ಅಸಿಸ್ಟೆಂಟ್ ಕಮೀಷನರ್ ಸಿದ್ದು ಹುಲ್ಲೋಳಿ ಆಗಮಿಸಿ ಮಾತನಾಡಿ ಶೀಘ್ರವೇ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಇರುವಂತ ಜಾಗವನ್ನು ಸರ್ವೆ ಮಾಡಿ ನಂತರ ತಾವು ಇಟ್ಟಿರುವ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಪ್ರಶಾಂತ ಚನಗೊಂಡ, ಸಿ ಪಿ ಐ ಅಶೋಕ ಸದಲಗಿ ಸೇರಿದಂತೆ ಮುಂತಾದವರು ಆಗಮಿಸಿದ್ದರು.

Share Post

Leave a Reply

Your email address will not be published. Required fields are marked *

error: Content is protected !!