ನಿತ್ಯ ಮಗನನ್ನು ಶಾಲೆಗೆ ಹೊತ್ತು ಸಾಗುವ ಮಹಾತಾಯಿ

ಚಳ್ಳಕೆರೆ : ಎಲ್ಲರಂತೆ ತನ್ನ ಮಗನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಸುವ ಮಹಾದಾಸೆಯಿಂದ ತಾಯಿಯೊಬ್ಬಳು ತನ್ನ ವಿಕಲಚೇತನ ಪುತ್ರನನ್ನು ನಿತ್ಯ ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ತಲುಪಿಸುವ ದೃಶ್ಯಗಳನ್ನು ಕಂಡರೆ ಎಂಥಾ ಕಲ್ಲು ಹೃದಯವೂ ಕರಗಿ ಹೋಗುವಂತಿದೆ.

ಶಾಲೆ ಪ್ರಾರಂಭವಾದಾಗಿನಿಂದ ಶಾಲೆ ಬಿಡುವವರೆಗು ತಾಯಿ ಶಾಲೆಯಲ್ಲೇ ಇದ್ದು ಶಾಲೆ ಬಿಟ್ಟ ನಂತರ ಬ್ಯಾಗ್ ಜೊತೆಗೆ ಮಗನನ್ನು ಹೆಗಲ ಮೇಲೆ ಹೊತ್ತು ಮನೆಗೆ ಬರುತ್ತಾರೆ.

ತಾಯಿ ಆಸೆ ಈಡೇರಿಸಲು ಮಗ ಸಹ ಶ್ರದ್ಧೆಯಿಂದ ಓದುತ್ತಿದ್ದಾನೆ. ಎಲ್ಲಾರಂತೆ ಶಾಲೆಯಲ್ಲಿ ಕಲಿಯುತ್ತಿರುವ ವಿಕಲಚೇತನ ವಿದ್ಯಾರ್ಥಿಯ ಹೆಸರು ರಾಜೇಶ್ ಬಾಬು. ಈತ ತನ್ನ ತಾಯಿಯ ಸಹಾಯದಿಂದ ಶಿಕ್ಷಣ ಕಲಿತು ಸರ್ಕಾರಿ ಹುದ್ದೆಗಿಟ್ಟಿಸುವ ಆಸೆ ಹೊಂದಿದ್ದಾನೆ.

ನಿಜ ಮಾತೃವಾತ್ಸಲ್ಯನೆ ಅಂಥದ್ದು. ತಾಯಿನೇ ದೇವರು ಮೊದಲ ಗುರು ಎನ್ನುವ ಮಾತು ಸತ್ಯ. ತನಗೆ ಕಷ್ಟವಾದರೂ, ಊಟ ಇಲ್ಲದಿದ್ದರು ಮಕ್ಕಳು ಚೆನ್ನಾಗಿರಲಿ ಎಂದು ಹಾರೈಸುವ ಹೃದಯ ತಾಯಿ.

ತಾಲ್ಲೂಕಿನ ರಂಗವ್ವನಹಳ್ಳಿ(ಕಡುದಾರಹಳ್ಳಿ ) ಗ್ರಾಮದಲ್ಲಿ ಜಯಲಕ್ಷ್ಮಿ ಹಾಗೂ ವೀರಣ್ಣ ದಂಪತಿಗೆ ಮೊದಲ ಮಗ ರಾಜೇಶ. ಹುಟ್ಟಿದಾಗ ಎಲ್ಲರಂತೆ ಅರೋಗ್ಯವಂತನಾಗಿದ್ದು ರಾಜೇಶ ನಂತರ ಮತ್ತಿಬ್ಬರು ಗಂಡು ಮಕ್ಕಳು ಜನಿಸುತ್ತಾರೆ. ತಂದೆ ವೀರಣ್ಣ ಸಾವಿನ ನಂತರ ರಾಜೇಶ ಅಂಗವಿಕಲಾನಾಗುತ್ತಾನೆ.

ಒಂದನೆ ತರಗತಿಯಿಂದ ಏಳನೇ ತರಗತಿಯವರಗೆ ರಂಗವ್ವನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ನಂತರ 8 ನೇ ತರಗತಿ ಆ ಗ್ರಾಮದಲ್ಲಿ ಇಲ್ಲದ ಕಾರಣ ಮೀರಾಸಾಬಹಳ್ಳಿ ರಾಣಿಕೆರೆ ಗ್ರಾಮಾಂತರ ವಿದ್ಯಾಸಂಸ್ಥೆಗೆ ಪ್ರೌಡಶಾಲೆಗೆ ಸೇರಿಸಬೇಕಾಗುತ್ತದೆ.

ಆ ಸಂದರ್ಭದಲ್ಲಿ ತಾಯಿ ಬೇಡ ಸಾಕು ಮನೆಯಲ್ಲೆ ಇರು ಎಂದಾಗ ರಾಜೇಶ ಇಲ್ಲಾ ನಾನು ಶಾಲೆಗೆ ಹೋಗಲೆಬೇಕೆಂದು ಹಠ ಹಿಡಿಯುತ್ತಾನೆ. ಇದರಿಂದ ತಾಯಿ ಮೀರಾಸಾಬಿಹಳ್ಳಿ ಪ್ರೌಡಶಾಲೆಗೆ ದಾಖಲಿಸುತ್ತಾಳೆ.

ಶಾಲೆಗೆ ದಾಖಾಲಾದಾಗಿನಿಂದ ನಿತ್ಯವೂ ಹಳ್ಳ ದಾಟಿ ಸುಮಾರು ನಾಲ್ಕು ಕಿ.ಮೀ. ಶಾಲೆಯ ಬ್ಯಾಗ್ ಜೊತೆಗೆ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಬಿಡುವುದು ಸಂಜೆ ಕರೆದುಕೊಂಡು ಬರುವುದು ತಾಯಿಯ ನಿತ್ಯ ಕಾಯಕ.

ರಾಜೇಶ ಸಹೋದರರಾದ ಸತೀಶ ಬಾಬು ಆರನೇ ತರಗತಿ ಶಂಕರ ವಿಜಯ ಮೂರನೇ ತರಗತಿ ರಂಗವ್ವನಹಳ್ಳಿಯ ಸರ್ಕರಿ ಶಾಲೆಯಲ್ಲಿ ಓದುತ್ತಿದ್ದಾರೆ. ಮಗ ರಾಜೇಶ ಎರೆಡು ಕಾಲುಗಳು ಸ್ವಾಧೀನ ಕಳೆದುಕೊಂಡಿರುವುದರಿಂದ ಮಗನ ಎಲ್ಲಾ ಸೇವೆಯನ್ನು ತಾಯಿಯೇ ಮಾಡುತ್ತಾಳೆ.

ನಾನು ವಿಧವೆ ಆಗಿರುವುದರಿಂದ ವಿಧವಾ ವೇತನ ಬರುತ್ತಿದೆ. ಜೊತೆಗೆ ರಾಜೇಶಬಾಬು ಗೆ ವಿಕಲಚೇತನ ಇಲಾಖೆಯಿಂದ ನೀಡಲಾಗುತ್ತಿರುವ ವೇತನದಿಂದಲೇ ಜೀವನ ಸಾಗಿಸಬೇಕಿದ್ದು ನಿರ್ವಹಣೆ ಬಹಳ ಕಷ್ಟಕರವಾಗಿದೆ. ಅಲ್ಲದೇ ನಮಗೆ ಸ್ವಂತ ಮನೆ ಇಲ್ಲದೆ ತಾಯಿಯ ಮನೆಯಲ್ಲಿ ವಾಸವಾಗಿದ್ದೇವೆ ಎಂದು ಜಯಲಕ್ಷ್ಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ‌.

ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರನ್ನು ದೂರವಾಣಿ ಕರೆ ಮೂಲಕ ಸಂಪರ್ಕಸಿದಾಗ ಜಯಲಕ್ಷ್ಮಿ ಕುಟುಂಬಕ್ಕೆ ಸ್ವಂತ ವಾಸದ ಮನೆ ಇಲ್ಲ ಎಂದು ತಿಳಿದು ಬಂದಿದ್ದು ಸರ್ಕಾರದಿಂದ ಮನೆ ನೀಡಲಾಗುವುದು. ಜೊತೆಗೆ ರಾಜೇಶಬಾಬು ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುವುದು, ಎಂದಿದ್ದಾರೆ.

ಬಿಇಓ ಸಿ.ಎಸ್.ವೆಂಕಟೇಶಪ್ಪ ಶಾಲೆಗೆ ಭೇಟಿ ನೀಡಿದ್ದು ರಾಜೇಶ ಬಾಬು ಶಾಲೆಗೆ ಕರೆತರುವ ಮತ್ತು ಬಿಡುವ ವ್ಯವಸ್ಥೆ ಮಾಡಲಾಗಿದೆ. ದಿನ ನಿತ್ಯ ಹಾಲು, ಮೊಟ್ಟೆ, ನೀಡಿ ಅರೋಗ್ಯ ತಪಾಸಣೆ ಮಾಡಿಸಲಾಗುತ್ತದೆ ಎಂದರು.

ಉಪನ್ಯಾಸಕ ಡಿ. ಮೂಡಲಗಿರಿಯಪ್ಪ ಮಾತನಾಡಿ ರಾಜೇಶ ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದಾನೆ. ಬರವಣಿಗೆಯ ಸಹ ಉತ್ತಮವಾಗಿ ಬರೆಯುತ್ತಾನೆ. ಸ್ವಲ್ಪ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಆದರೂ ಆಸಕ್ತಿ ಕಡಿಮೆಯಾಗಿಲ್ಲ ಎನ್ನುತ್ತಾರೆ.

ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿ ಪಡುತ್ತಿರುವ ಶ್ರಮ ಅಷ್ಟಿಷ್ಟಲ್ಲ. ಈ ಮಹಾ ತಾಯಿ ತನ್ನ ಜೀವನವನ್ನು ಮಗನ ವಿದ್ಯಾಭ್ಯಾಸಕ್ಕಾಗಿ ಮುಡುಪಾಗಿಟ್ಟಿದ್ದಾಳೆ.

Share Post

Leave a Reply

Your email address will not be published. Required fields are marked *

error: Content is protected !!