ಕೇವಲ 8 ಸಾವಿರಕ್ಕೆ ಹರಾಜ್‌ ಆದ ಇಂಡಿಕಾ ಕಾರು

ಕೊಳ್ಳೇಗಾಲ : ಅಬಕಾರಿ ಇಲಾಖೆಯು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ ಹಲವು ವಾಹನಗಳ ಹರಾಜ್ ಪ್ರಕ್ರಿಯೆ ಇಂದು ನಡೆಸಿದ್ದು ಇಲ್ಲೊಂದು ಇಂಡಿಕಾ ಕಾರು ಕೇವಲ ಎಂಟು ಸಾವಿರಕ್ಕೆ ಹರಾಜ್ ಆಯಿತು.

ಹೌದು, ಇಂದು ಒಟ್ಟು 29 ಬೈಕ್‌ಗಳು ಹಾಗೂ ಒಂದು ಕಾರಿನ ಹರಾಜ್ ಪ್ರಕ್ರಿಯೆ ನಡೆಯಿತು. ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾಗಿದ್ದ ಟಾಟಾ ಇಂಡಿಕಾ ಕಾರಿನ ಪ್ರಕರಣ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಹರಾಜ್‌ಗೆ ಇರಿಸಲಾಗಿತ್ತು. ಆದರೆ ಬಿಡ್ ಕೂಗುವವರು ಯಾರೂ ಇಲ್ಲದೆ ಕೇವಲ ಎಂಟು ಸಾವಿರ ರೂ.ಗಳಿಗೆ ವ್ಯಕ್ತಿಯೊಬ್ಬರು ಪಡೆದುಕೊಂಡರು.

ಕಾರಿಗೆ ಬಿಡ್ ಕೂಗಲು ಮುಂಗಡ ಹದಿನೈದು ಸಾವಿರ ಪಾವತಿ ಮಾಡಬೇಕಿತ್ತು. ಆದರೆ ಹರಾಜ್ ನಲ್ಲಿ ನೆರೆದಿದ್ದವರ ಪೈಕಿ ಎಲ್ಲರೂ ಐದು ಸಾವಿರವಷ್ಟೇ ಕಟ್ಟಿದ್ದರು. ಐದು ಸಾವಿರ ಕಟ್ಟಿದವರಿಗೆ ಬೈಕ್‌ಗಳಿಗೆ ಮಾತ್ರ ಬಿಡ್ ಮಾಡಲು ಅವಕಾಶವಿತ್ತು. ಒಬ್ಬರು ಮಾತ್ರ ಹದಿನೈದು ಸಾವಿರ ಹಣ ಪಾವತಿಸಿ ರಶೀದಿ ಪಡೆದಿದ್ದರಿಂದ ಅವರೇ ಅತೀ ಕಡಿಮೆ ಬೆಲೆಗೆ ಕಾರು ಗಿಟ್ಟಿಸಿಕೊಂಡರು.

ಉಳಿದಂತೆ ಬೈಕ್‌ಗಳು ಮತ್ತು ಮೊಪೆಡ್‌ಗಳು ಸೇರಿ ಒಟ್ಟು 29 ದ್ವಿಚಕ್ರ ವಾಹನಗಳ ಹರಾಜು ನಡೆಯಿತು. ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಬಿಡ್‌ಗಳ ಮೇಲೆ ಬಿಡ್ ಕೂಗಿದರು.

ಹರಾಜಾದ ಪ್ರತಿ ವಾಹನಕ್ಕೆ ಸ್ಥಳದಲ್ಲೇ ಶೇ.25% ರಷ್ಟು ಹಣವನ್ನು ಪಾವತಿ ಮಾಡಿಸಿಕೊಳ್ಳಲಾಯಿತು. ಮೇಲಧಿಕಾರಿಗಳಿಂದ ಪ್ರಕ್ರಿಯೆ ಪೂರ್ಣ ಆದ ಬಳಿಕ ಬಾಕಿ ಹಣ ಪಡೆದು ವಾರಸುದಾರರಿಗೆ ವಾಹನ ನೀಡಲಾಗುತ್ತದೆ.

ಹೀರೋ ಹೊಂಡಾ ಸ್ಪ್ಲೆಂಡರ್, ಪ್ಯಾಷನ್ ಪ್ರೊ, ಹೊಂಡಾ ಸೈನ್, ಬಜಾಜ್ ಡಿಸ್ಕವರ್, ಹೊಂಡಾ ಆಕ್ಟಿವಾ, ಟಿವಿಎಸ್ ಎಕ್ಸೆಲ್, ಹೆವಿ ಡ್ಯೂಟಿ ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳು ಹರಾಜಾದವು.

ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕಿ ಮೀನಾ, ಉಪವಿಭಾಗ ನಿರೀಕ್ಷಕ ವಿಕ್ರಂ, ಉಪ ನಿರೀಕ್ಷಕ ತನ್ವೀರ್ ಸಿಬ್ಬಂದಿಗಳಾದ ಪ್ರದೀಪ್, ಸುಂದ್ರಪ್ಪ, ಜಯಪ್ರಕಾಶ್, ರಮೇಶ್, ರಾಜು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!