ಲ್ಯಾಂಕೋ ಹೈವೇ ಲಿಮಿಟೆಡ್ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕೋಲಾರ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೊಸಕೋಟೆ ಲ್ಯಾಂಕೋ ಹೈವೇ ಲಿಮಿಟೆಡ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾದೇಶಿಕ ಅಸಂಘಟಿತ ಕಾರ್ಮಿಕ ಸಂಘ ಹಾಗೂ ಪ್ರಗತಿಪರ ರೈತ ಸಂಘಟನೆಗಳಿಂದ ಸಾಂಕೇತಿಕ ಶವ ಸಂಸ್ಕಾರ ನಡೆಸಿ, ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ನಗರದ ದೇವರಾಯ ಸಮುದ್ರ ಬಳಿಯ ಟೋಲ್ ವಸೂಲಾತಿ‌ ಕೇಂದ್ರಕ್ಕೆ ಮುತ್ತಿಗೆ ಹಾಕಿದ ನೂರಾರು ಪ್ರತಿಭಟನಾಕಾರರು ಟೋಲ್ ವಸೂಲಿ ತಡೆದು, ಲ್ಯಾಂಕೋ ಕಂಪನಿಯ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಟೋಲ್ ಮುಂಭಾಗ ಕುಳಿತ ಪ್ರತಿಭಟನಾಕಾರರು ಸಾಂಕೇತಿಕ ಶವಸಂಸ್ಕಾರ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಿಕ್ಕಾರ ಕೂಗಿದರು.

ಗುಣಮಟ್ಟವಿಲ್ಲದ ಮತ್ತು ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಮಾಡಿರುವುದರಿಂದ ಅಪಘಾತಗಳು ಹೆಚ್ಚಾಗಿವೆ. ಅಲ್ಲದೇ ಅಪಘಾತದಲ್ಲಿ ಮೃತಪಟ್ಟ ಯಾವುದೇ ಕುಟುಂಬಕ್ಕೂ ಈವರೆಗೂ ಪರಿಹಾರ ನೀಡಿಲ್ಲ. ಕೂಡಲೇ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಹಾಗೂ ಅಂಗಾಂಗ ಕಳೆದುಕೊಂಡವರಿಗೆ 15 ಲಕ್ಷ ನಗದು ಪರಿಹಾರ ಕೊಡಬೇಕೆಂದು ಒತ್ತಾಯ ಮಾಡಿದರು.

ಟೋಲ್‌ಗಳ ಬಳಿ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲ. ಹೆದ್ದಾರಿಯುದ್ದಕ್ಕೂ ವಿದ್ಯುತ್ ದೀಪ ಅಳವಸಿಲ್ಲ. ಅಷ್ಟೇ ಅಲ್ಲದೆ ಕಳ್ಳತನ ಹಾಗೂ ದರೋಡೆಗಳು ನಡೆಯುತ್ತಿದ್ದು ಸಿಸಿ ಟಿವಿ ಸಹ ಅಳವಡಿಸಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಬಂದ ಲ್ಯಾಂಕೋ ಅಧಿಕಾರಿಗಳು ಎಲ್ಲಾ ಬೇಡಿಕೆಗಳನ್ನು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು.

ಒಂದು ತಿಂಗಳ ಒಳಗೆ ಸಮಸ್ಯೆ ಪರಿಹರಿಸದಿದ್ರೆ ಮುಂದಿನ ತಿಂಗಳು 18 ರಂದು ಟೋಲ್‌ಗೆ ಬೆಂಕಿ ಹಚ್ಚಿ ಉಗ್ರ ಪ್ರತಿಭಟನೆ ಮಾಡುತ್ತೇವೆ. ಮುಂದಿನ ಎಲ್ಲಾ ಅನಾಹುತಗಳಿಗೂ ನೀವೇ ಜವಾಬ್ದಾರರು ಎಂದು ಲ್ಯಾಂಕೋ ಅಧಿಕಾರಿಗಳಿಗೆ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

Share Post

Leave a Reply

Your email address will not be published. Required fields are marked *

error: Content is protected !!