ಅಕ್ರಮ‌ ಗಣಿಗಾರಿಕೆ ವಿರುದ್ದ ಹೊನ್ನವಳ್ಳಿ‌ ಗಣೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

8 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ‌ ಕಛೇರಿ‌ ಎದುರು ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿರುವ ಕಾಡಾನೆ ಕಾಟದ ವಿರುದ್ಧ ಮತ್ತೊಂದು ಹೋರಾಟ ಶುರುವಾಗಿದೆ. ನಿತ್ಯ ಸಮಸ್ಯೆಯಾಗಿರುವ ಆನೆ ಹಾವಳಿಗೆ ಕಡಿವಾಣ ಹಾಕಬೇಕು. ಕಾಡಾನೆ ಕಾಡಿನಿಂದ ನಾಡಿಗೆ ಬರಲು, ಅಕ್ರಮ ಕಲ್ಲು ಗಣಿಗಾರಿಕೆಯೇ ಕಾರಣವಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಲೂರಿನಲ್ಲಿ ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೈತರು ಸೇರಿ ನಡೆಸಿದ ಪ್ರತಿಭಟನೆಯಲ್ಲಿ 8 ದಿನಗಳ ಒಳಗೆ ಸಮಸ್ಯೆಗೆ ಪರಿಹಾರ ನೀಡುವ ಸೂಕ್ತ ಭರವಸೆ ನೀಡದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಆಲೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಮಸ್ಯೆಗೆ ಪರಿಹಾರ ಕಂಡು ಹಿಡಿಯದ ಸರಕಾರ, ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೊಷಣೆ ಕೂಗಿ ಆಕ್ರೋಶಿಸಿದರು.

ಕಾಡಾನೆ ಸಮಸ್ಯೆಯಿಂದ ಸಾವು-ನೋವು ಸಂಭವಿಸುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ನಷ್ಟಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.

ಯಾವುದೇ ಅಡೆತಡೆ ಇಲ್ಲದ ಕಾರಣ ಕೊಡಗು ಭಾಗದಿಂದ ತಂಡೋಪ ತಂಡವಾಗಿ ಕಾಡಾನೆಗಳು ಮಲೆನಾಡು ಭಾಗಕ್ಕೆ ಬರುವುದು ಸಾಮಾನ್ಯವಾಗಿದೆ. ಹೀಗೆ ಬಂದ ಆನೆಗಳು ನೇರವಾಗಿ ಗ್ರಾಮಗಳತ್ತ ಮುಖ ಮಾಡಿ ಜೀವ ಭಯದಿಂದ ಬದುಕುವಂತೆ ಮಾಡಿವೆ ಎಂದು ಹೇಳಿದರು.

ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದ ಅನೇಕ ಕಡೆ, ಅದರಲ್ಲೂ ರಂಗನಾಥಸ್ವಾಮಿ ಸನ್ನಿಧಿ ಭಾಗದಲ್ಲೇ ಗಣಿಗಾರಿಕೆ ಮಾಡಲಾಗುತ್ತಿದೆ. ಈ ವೇಳೆ ಶಕ್ತಿಯುತ ಬಂಡೆ ಸಿಡಿಸುವುದರಿಂದ ಜೀವ ಭಯದಿಂದ ಆನೆಗಲು ಕಾಡಿನಿಂದ ನಾಡಿಗೆ ಬರೋದು ಸಾಮಾನ್ಯವಾಗಿದೆ. ಕಲ್ಲು ಗಣಿಗಾರಿಕೆ ಮತ್ತು ಕ್ರಶನ್ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ನೀಡುವ ಮೂಲಕ ತಾವೇ ಸಮಸ್ಯೆಗೆ ಆಹ್ವಾನ ನೀಡಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕದೇ ಇದ್ರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಮತ್ತೊಂದೆಡೆ ಕಾಡಾನೆಯಿಂದ ಆಗಿರುವ ಹಾನಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನೇ ನೀಡಿಲ್ಲ. ಮೃತಪಟ್ಟವರ ಕುಟುಂಬಕ್ಕೆ ಇಂತಿಷ್ಟು ಎಂದು ಪರಿಹಾರ ನೀಡಲಾಗಿದೆ. ಬೆಳೆ ಹಾನಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಿಕೆ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಸುಜಾತ ಗಣೇಶ್, ಗ್ರಾಮಸ್ಥರು, ರೈತ ಮುಖಂಡರು ‌ನೂರಾರು‌ ಸಂಖ್ಯೆಯಲ್ಲಿ‌ ಭಾಗವಹಿಸಿದ್ದರು.

Share Post

Leave a Reply

Your email address will not be published. Required fields are marked *

error: Content is protected !!