ಹದಗೆಟ್ಟ ಕ್ರೀಡಾಂಗಣ ದುರಸ್ತಿಗೊಳಿಸಲು ಆಗ್ರಹ

ಯಾದಗಿರಿ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿನ ಮೈದಾನ ಅಂದ ಕಳೆದುಕೊಂಡಿದ್ದು ಇತ್ತ ಯಾರೂ ಕೂಡ ಗಮನ ನೀಡದ ಕಾರಣ ಕನಿಷ್ಟ ವಾಕಿಂಗ್ ಮಾಡಲು ಸಹ ಯೋಗ್ಯವಿಲ್ಲದಷ್ಟು ಹದಗೆಟ್ಟಿದೆ.

ಸುಮಾರು ಐದಾರು ವರ್ಷಗಳಿಂದ ಕನಿಷ್ಟ ದುರಸ್ತಿಯನ್ನೂ ಮಾಡದೇ ಇರುವುದರಿಂದ ನಿತ್ಯ ಇಲ್ಲಿ ಆಟೋಟ ಮಾಡುವ, ವಾಕಿಂಗ್ ಮಾಡುವವರಿಗೆ, ಕ್ರೀಡಾಪಟುಗಳಿಗೆ ತೀವ್ರ ತೊಂದರೆಯಾಗುತ್ತಿದೆ.

ಇನ್ನು ಅನೇಕ ಕಡೆ ಟ್ರ್ಯಾಕ್ ನಲ್ಲಿರುವ ತಗ್ಗುಗಳಲ್ಲಿ ನೀರು ನಿಂತು ಸಮತಟ್ಟು ಹಾಳಾಗಿದೆ. ವಾಲಿಬಾಲ್ ಕೋರ್ಟ್‌ನಲ್ಲಿ ಹುಲ್ಲು ಬೆಳೆದು ನೀರು ನಿಂತು ತೀರ ಹದಗೆಟ್ಟಿದೆ. ಖೋಖೋ ಮೈದಾನವಂತೂ ಕುಸ್ತಿ ಮೈದಾನದಂತಾಗಿ ಅದರಲ್ಲಿ ನೀರು ನಿಂತಿದ್ದು ಅದರಲ್ಲಿ ಹುಲ್ಲು ಬೆಳೆದಿದೆ. ರನ್ನಿಂಗ್ ಟ್ರ್ಯಾಕ್ ಹಾಳಾಗಿ ಹಲವು ವರ್ಷಗಳೇ ಕಳೆದಿವೆ. ಈ ಟ್ರ್ಯಾಕ್ ನಲ್ಲಿ ಓಡಿದರೆ ಕಾಲಿನ ತೊಗಲು ಕಿತ್ತಿಕೊಂಡು ಬರುವಂತಹ ರೀತಿಯಲ್ಲಿ ಕಲ್ಲುಗಳು ಎದ್ದಿದ್ದು ಅಲ್ಲಲ್ಲಿ ತಗ್ಗು ದಿಣ್ಣೆಗಳು ಉದ್ಭವಿಸಿವೆ. ಇದರಿಂದ ಅನೇಕರು ಕಾಲು ತೊಗಲು ಕಿತ್ತಿಕೊಂಡಿರುವುದಲ್ಲದೆ, ಉಳುಕಿರುವುದಕ್ಕೂ ಸಾಕಷ್ಟು ಉದಾಹರಣೆಗಳಿವೆ.

ಈಗಾಗಲೇ ಹೋಬಳಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಟೋಟಗಳು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು ಆಟಗಾರರು ಇಂತಹ ಕಳಪೆ ಟ್ರ್ಯಾಕ್ ನಲ್ಲಿಯೇ ಅಧಿಕಾರಿಗಳನ್ನು ಶಪಿಸುತ್ತಾ ಆಟವಾಡಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇನ್ನು ಮುಂದೆ ಕಾಲೇಜು ಮಟ್ಟದ ಕ್ರೀಡೆಗಳು ಹಾಗೂ ರಾಜ್ಯಮಟ್ಟದ ಕ್ರೀಡೆಗಳು ನಡೆಯುವ ಸಾಧ್ಯತೆಗಳಿವೆ. ಆದರೆ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಕನಿಷ್ಟ ಸೌಕರ್ಯವೂ ಇಲ್ಲದ ಕ್ರೀಡಾಂಗಣದಿಂದಾಗಿ ನರಕದಲ್ಲಿ ಅಭ್ಯಾಸ (ಪ್ರಾಕ್ಟೀಸ್) ಮಾಡಿದಂತೆ ಆಗುತ್ತಿದೆ.

ಇಂತಹ ಸೌಕರ್ಯ ರಹಿತ ಮೈದಾನದಲ್ಲಿ ಆಡಿ ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳು ಹೇಗೆ ಸ್ಪರ್ಧಿಸಲು ಸಾಧ್ಯ ಎಂಬುದನ್ನು ಮನಗಂಡು ಸಂಬಂಧ ಪಟ್ಟವರು ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ತಕ್ಷಣ ಕ್ರಮವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಬಂಜಾರ ಸಮಾಜದ ಸಂಘದವರು ಆಗ್ರಹಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!