ನೌಕರರ ಸಮಸ್ಯೆಗಳಿಗೆ ರಾಜ್ಯ ಸಂಘದಿಂದ ಸದಾಕಾಲ ಸ್ಪಂದನೆ

ಬಾಗಲಕೋಟೆ : ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ನೌಕರರ ಕಾರ್ಯ ಮಹತ್ವದ್ದಾಗಿದೆ. ನೌಕರರ ಸಮಸ್ಯೆಗಳಿಗೆ ರಾಜ್ಯ ಸಂಘವು ಸದಾಕಾಲ ಸ್ಪಂದಿಸುವ ಕಾರ್ಯ ಮಾಡುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ ಹೇಳಿದರು.

ರಬಕವಿ-ಬನಹಟ್ಟಿ ತಾಲ್ಲೂಕಿನ ನಗರಸಭೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಬಕವಿ-ಬನಹಟ್ಟಿ ತಾಲ್ಲೂಕಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೊತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ನೌಕರರಿಗೆ ಸಿಗುವಂತೆ ಸಮಾನ ವೇತನ ರಾಜ್ಯ ಸರ್ಕಾರದ ನೌಕರರಿಗೂ ದೊರಕುವಂತಾಗಲು ಸಂಘ ಸರ್ಕಾರದ ಗಮನ ಸೆಳೆದಿದೆ. 2020 ರ ಮೇ ತಿಂಗಳಿಗೆ ಸಂಘಕ್ಕೆ ನೂರು ವರ್ಷ ತುಂಬಲಿದೆ ಎಂದರು.

ಚಿಮ್ಮಡ ವಿರಕ್ತಮಠದ ಶ್ರಿ ಪ್ರಭು ಸ್ವಾಮಿಗಳು ಮಾತನಾಡಿ ನೌಕರರ ಹಿತ ಬಯಸಿ ಸಂಘಟನೆಗಳು ಮಾಡುವ ಕಾರ್ಯ ಸ್ತುತ್ಯವಾದುದು. ಜನಸಾಮಾನ್ಯರ ಕೆಲಸಗಳು ಶೀಘ್ರ ಆಗಬೇಕು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಮುಖ್ಯಅತಿಥಿಗಳಾಗಿ ಆಗಮಿಸಿ ನೌಕರರಿಗೆ ಸರ್ಕಾರದಿಂದ ದೊರೆಯುವ ಮಹತ್ವಪೂರ್ಣ ಯೋಜನೆಗಳು, ಸೌಲಭ್ಯಗಳು ಸರಿಯಾಗಿ ದೊರೆಯುವಂತಾಗಲು ಸಂಘ ನಿರಂತರ ಕಾರ್ಯ ಮಾಡಲಿದೆ. ಎನ್‌ಪಿಎಸ್ ರದ್ದಾಗಲು ಸಂಘಟನೆಯೊಂದಿಗೆ ನೌಕರರು ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದರು.

ತಾಲ್ಲೂಕಾ ದಂಡಾಧಿಕಾರಿಗಳಾದ ಪ್ರಶಾಂತ ಚನಗೊಂಡ ಮಾತನಾಡಿ, ನೌಕರರ ಹಿತಾಸಕ್ತಿಗನುಗುಣವಾಗಿ ಸಂಘ ಕಾರ್ಯ ಮಾಡಬೇಕು. ಅವರ ಕಾರ್ಯಕ್ಷಮತೆಗೆ, ನೌಕರರ ಒಳಿತಿಗೆ ಸಂಘ ರೂಪರೇಷೆಗಳನ್ನು ಹಾಕಿಕೊಳ್ಳಬೇಕು ಎಂದರು.

ತಾಲ್ಲೂಕಾ ಘಟಕದ ಅಧ್ಯಕ್ಷ ಬಸವರಾಜ ಹನಗಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೌಕರರ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗವನ್ನು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ.ಗಳು ದೊರಕುವಂತಾಗಲು ರಾಜ್ಯ ಘಟಕದ ಸಹಕಾರವೂ ಅವಶ್ಯಕತೆ ಇದೆ. ನಮ್ಮ ತಾಲ್ಲೂಕು ಘಟಕವು 25 ಲಕ್ಷ ರೂಗಳನ್ನು ಕ್ರೊಢೀಕರಿಸಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್.ಎಂ.ಕೊಡಗೆ, ಮುಧೋಳದ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರಿಶೈಲ ಬಾಡಗಿ, ಜಮಖಂಡಿ ತಾಲ್ಲೂಕಾ ಘಟಕದ ಅಧ್ಯಕ್ಷ ಪಿ.ಬಿ.ಅಜ್ಜನವರ್, ಜಮಖಂಡಿ ತಾಲ್ಲೂಕು ಪ್ರಾ. ಶಾ. ಶಿ.ಸಂಘದ ಅಧ್ಯಕ್ಷ ಎಸ್.ಪಿ.ಹೂಗಾರ್, ಬಾಗಲಕೋಟ ಜಿಲ್ಲಾ ಸಂಘದ ಗೌರವಾಧ್ಯಕ್ಷ ಬಿ.ಎಸ್.ಶಿರೂರ, ಕಾರ್ಯದರ್ಶಿ ವಿಠ್ಠಲ ವಾಲೀಕಾರ, ಎಸ್. ವಿ. ಬುಜರುಕ್ ವೇದಿಕೆ ಮೇಲಿದ್ದರು.

ಪದಾಧಿಕಾರಿಗಳಿಗೆ ಪ್ರಮಾಣಪತ್ರ, ಸಾಧಕರಿಗೆ ಸನ್ಮಾನ ನೆರವೇರಿತು. ಸಮಾರಂಭದಲ್ಲಿ ಮಲ್ಲು ನಾವಿ, ಎಂ. ಎಸ್. ಗಡೆನ್ನವರ, ಶಿವು ಯಾದವಾಡ, ಬಸವರಾಜ ತಾಳಿಕೋಟಿ, ಪ್ರಕಾಶ ವಂದಾಲ, ಶಂಕರ ಹಳಿಂಗಳಿ, ಸಿದ್ದು ಕಂಕಣವಾಡಿ, ಮಂಜುನಾಥ ಆಲಗೂರ, ಎಂ.ಎ.ಬಾಗವಾನ್, ಎಂ.ಬಿ. ಗೋಣಿ, ಎಸ್. ಎಸ್. ಗೊಬ್ಬಾಣಿ,
ಶ್ರಿಮತಿ ಎಲ್.ವಿ.ಪತ್ತಾರ, ರಾಜ್ಯ ಪರಿಷತ್ ಸದಸ್ಯ ಮಹೇಶ ಬಾಗಲಕೋಟ, ಖಜಾಂಚಿ ಪ್ರಶಾಂತ್ ಹೊಸಮನಿ, ನಿರ್ದೇಶಕ ಶಿವಪ್ರಸಾದ ಯಾದವಾಡ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Share Post

Leave a Reply

Your email address will not be published. Required fields are marked *

error: Content is protected !!