ಆರ್.ಎಲ್.ಜಾಲಪ್ಪ ಒಡೆತನದ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮೇಲೆ ಐಟಿ ಧಾಳಿ

ಕೋಲಾರ : ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರಿಗೆ ಸೇರಿದ ವಿದ್ಯಾಸಂಸ್ಥೆ, ಆಸ್ಪತ್ರೆ ಕಚೇರಿಗಳು ಹಾಗೂ ಸಂಬಂಧಿಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಕೋಲಾರ ಹೊರವಲಯದಲ್ಲಿರುವ ಶ್ರೀ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್, ಆರ್ ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಇನ್ನಿತರ ಕಾಲೇಜು ಕಮ್ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ.

ಆರ್.ಎಲ್.ಜಾಲಪ್ಪ ಅವರು ದೇವರಾಜ್ ಅರಸ್ ಅಕಾಡೆಮಿ ಫಾರ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್(ಎಸ್ ಡಿಯುಎಚ್ ಇಆರ್) ನ ಮುಖ್ಯಸ್ಥರಾಗಿದ್ದಾರೆ.

ಈ ಎಲ್ಲಾ ವಿದ್ಯಾಸಂಸ್ಥೆಗಳು ತೆರಿಗೆ ವಂಚನೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಸೀಟ್ ಹಂಚಿಕೆ ವೇಳೆ ಎಂಬಿಬಿಎಸ್​ಗೆ ಮೂರು ಕೋಟಿ, ಎಂಡಿ ಕೋರ್ಸ್​ಗೆ ಐದು ಕೋಟಿ ರೂಪಾಯಿ ಹಣ ಪಡೆದು ಸೀಟು ಕೊಟ್ಟಿರುವ ಆರೋಪ ಹಿನ್ನಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಳೆದ ವರ್ಷ ಐಟಿ ದಾಳಿ ವೇಳೆ ದಾಖಲೆ ಇಲ್ಲದ ಎರಡು ಕೋಟಿ ಹಣ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸದ್ಯಕ್ಕೆ ಕಾಲೇಜು, ಆಸ್ಪತ್ರೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿರುವುದರಿಂದ ಒಳಗೆ ಯಾರನ್ನು ಬಿಡುತ್ತಿಲ್ಲ.

ದಾಳಿ ಬಗ್ಗೆ ಆರ್ ಜಾಲಪ್ಪ ವಿದ್ಯಾಸಂಸ್ಥೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಗೆಸ್ಟ್​ಹೌಸ್​ನಲ್ಲಿ ಮಾಜಿ ಕೇಂದ್ರ ಸಚಿವ ಆರ್​.ಎಲ್​.ಜಾಲಪ್ಪ ಅವರನ್ನು ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!