ಏರ್ಶೋ ವೇಳೆ ಅಗ್ನಿಅವಘಡ ಕೇಸ್: ಹೈಕೋರ್ಟ್ ನೋಟಿಸ್

ಬೆಂಗಳೂರು: ನಗರದಲ್ಲಿ ಏರ್ ಶೋ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ನಡೆದಿದ್ದ ಭಾರೀ ಅಗ್ನಿ ಅವಘಡ ಪ್ರಕರಣ ಸಂಬಂಧ ರಕ್ಷಣಾ ಸಚಿವಾಲಯ, ಹೆಚ್‌ಎಎಲ್, ಅಗ್ನಿಶಾಮಕ ಮತ್ತು ತುರ್ತು ಸೇವೆ ಡಿಐಜಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೊಟೀಸ್ ನೀಡಿದೆ.

ಹೈಕೋರ್ಟ್ ರಜಾಕಾಲದ ಏಕಸದಸ್ಯ ನ್ಯಾಯಾಪೀಠ ಪ್ರಕರಣದ ವಿಚಾರಣೆ ನಡೆಸಿ, ಪ್ರಕರಣದ ಕ್ರಮ ಕುರಿತು ವರದಿ ನೀಡುವಂತೆ ತುರ್ತು ನೊಟೀಸ್ ಜಾರಿ ಮಾಡಿದೆ.

ಯಲಹಂಕದ ಏರೋ ಇಂಡಿಯಾದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ಇದೇ ವರ್ಷ ಫೆಬ್ರವರಿ 23 ರಂದು ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯ ವೇಳೆ ಅಗ್ನಿ ಅವಘಡದಲ್ಲಿ ಸುಮಾರು 400ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿದ್ದವು. ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿ ಕಡ್ಡಿ ಬಿಸಾಕಿದ್ದರಿಂದ ಅದು ಒಣ ಹುಲ್ಲಿನ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಘಟನೆಗೆ ಯಾವುದೇ ನಿಖರವಾದ ಕಾರಣ ತಿಳಿದುಬಂದಿರಲಿಲ್ಲ

ಈ ಪ್ರಕರಣದ ಬಗ್ಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಅಂತಾ ನಿನ್ನೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಹಾಗೂ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು.

ಏರೋ ಇಂಡಿಯಾದ ಸಂದರ್ಭದಲ್ಲಿ ನಡೆದ ಅಗ್ನಿ ಅವಘಡದ ತನಿಖೆಗೆ ಕೋರ್ಟ್ ವಿಚಾರಣಾ ಕಾಯ್ದೆಯಡಿ ನ್ಯಾಯಾಂಗ ಆಯೋಗವನ್ನು ರಚಿಸಬೇಕು. ಹಾಗೂ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ನೀಡಲು ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ನಗರ ಪೊಲೀಸ್ ಅಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

Share Post

Leave a Reply

Your email address will not be published. Required fields are marked *

error: Content is protected !!