ಬಿಜೆಪಿ ಸರ್ಕಾರಕ್ಕೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್

ಬೆಂಗಳೂರು – ನೆರೆ ಪೀಡಿತ ಪ್ರದೇಶಗಳ ಪುನರ್ವಸತಿಯಲ್ಲಿನ ವಿಳಂಬ ಹಾಗೂ ಕೇಂದ್ರದಿಂದ ಅನುದಾನ ಬಾರದೇ ಇರುವುದನ್ನು ಖಂಡಿಸಿರುವ ಕಾಂಗ್ರೆಸ್ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಾಗೂ ಬಿಜೆಪಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದೆ.

ನೆರೆ ಪೀಡಿತ 22 ಜಿಲ್ಲೆಗಳ 103 ತಾಲ್ಲೂಕುಗಳಲ್ಲಿ ಸುಮಾರು 35 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 1500 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ನೆರೆ ಹಾಗೂ ಬರ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆಗಳ ಚರ್ಚೆಗೆ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಹೆದರಿ ರಾಜ್ಯ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

1. ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಏಕೆ ಬಂದಿಲ್ಲ ? 2. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಹಾಗೂ ಕೇಂದ್ರ ತಂಡದ ಪ್ರವಾಹ ವೀಕ್ಷಣೆಯ ಫಲ ಏನು?
3. ಈ ಭೀಕರ ಪ್ರವಾಹ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಏಕೆ ಘೋಷಿಸಲಿಲ್ಲ ?
4. ಇಷ್ಟು ದೊಡ್ಡ ಮಟ್ಟದ ನಷ್ಟ ಸಂಭವಿಸಿದ್ದರೂ ಯಡಿಯೂರಪ್ಪನವರ ಬೇಡಿಕೆಯಂತೆ ಕೇಂದ್ರ ಸರ್ಕಾರ 5ಸಾವಿರ ಕೋಟಿ ರೂ. ಮಧ್ಯಂತರ ಪರಿಹಾರ ಏಕೆ ಬಿಡುಗಡೆ ಮಾಡಿಲ್ಲ ?
5. ಪ್ರಧಾನಿಯವರು ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡದೆ ಕರ್ನಾಟಕವನ್ನು ಅವಮಾನಿಸುತ್ತಿರುವುದು ಏಕೆ ?
6. ತಕ್ಷಣ ಪರಿಹಾರ ಬಿಡುಗಡೆಗಾಗಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿಲ್ಲ ಏಕೆ ?
7. ರಾಜ್ಯ ಸರ್ಕಾರ ಪ್ರಧಾನಿ ಬಳಿ ಪರಿಹಾರ ಕೇಳಲು ಸರ್ವಪಕ್ಷ ನಾಯಕರು, ಸಂತ್ರಸ್ತರು ಹಾಗೂ ರೈತ ಮುಖಂಡರನ್ನು ಏಕೆ ಕರೆದೊಯ್ಯುತ್ತಿಲ್ಲ ?
8. ಬಿಜೆಪಿ 25 ಮಂದಿ ಸಂಸದರು ತಮ್ಮ ಕರ್ತವ್ಯ ಮರೆತು ಕಣ್ಮರೆಯಾಗಿರುವುದು ಏಕೆ ?
9. ಸಂತ್ರಸ್ತರು ಪ್ರತಿಭಟಿಸುವರು ಎಂದು ಹೆದರಿ ಬೆಳಗಾವಿಯಲ್ಲಿ ಅಧಿವೇಶನ ಮಾಡದಿರುವುದು ಪಲಾಯನವಲ್ಲವೆ ?
10. ನಷ್ಟ 35,160 ಕೋಟಿ ಎಂದು ಅಂದಾಜಿಸಿ ರಾಜ್ಯವು 1500 ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿದ ಅನ್ಯಾಯವಲ್ಲವೆ ಎಂದು ಕಾಂಗ್ರೆಸ್ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತರ ನೀಡುವಂತೆ ಆಗ್ರಹಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!