ಆರ್ಟಿಕಲ್ 370 ರದ್ದು ಸಂಬಂಧ ಅಭಿಪ್ರಾಯ ಸಂಗ್ರಹಿಸಿದ ಸಚಿವ ಡಾ.ಹರ್ಷವರ್ಧನ್

ಕೋಲಾರ : ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ನಿಮಿತ್ತ ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ನಗರಕ್ಕೆ ಭೇಟಿ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಕೇಂದ್ರ ಸಚಿವ ಡಾ.ಹರ್ಷವರ್ಧನ್ ರೈತ ಪರ ಮುಖಂಡರು, ಪ್ರಗತಿಪರ ರೈತರು ಹಾಗು ದಲಿತಪರ ಹೋರಾಟಗಾರರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದು ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಮಾಲೋಚನೆ ನಡೆಸಿದ ಸಚಿವರು ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿದ್ರು.

ಕೋಲಾರ ನಗರದ ಟೊಮ್ಯಾಟೊ ಬೆಳೆಗಾರ ಸಿ.ಎಮ್‍.ಆರ್.ಶ್ರೀನಾಥ್ ಮನೆಗೆ ಭೇಟಿ ನೀಡಿದ ಸಚಿವರು ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಕೋಲಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಆಂದೋಲನಕ್ಕೆ ಚಾಲನೆ ನೀಡಿದರು.

ಸಚಿವರಿಗೆ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಎಮ್‍ಎಲ್‍ಸಿ ವೈಎ ನಾರಾಯಣಸ್ವಾಮಿ ಹಾಗು ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.

ಮಧ್ಯಾಹ್ನ ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮಕ್ಕೆ ಸಚಿವ ಡಾ ಹರ್ಷವರ್ಧನ್ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ವೆಂಕಟಮುನಿಯಪ್ಪ, ಸಂಸದ ಎಸ್ ಮುನಿಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಎಮ್‍ಎಲ್‍ಸಿ ವೈಎ ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ಹಿರಿಯ ನಾಯಕರು ಹಾಜರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ ಹರ್ಷವರ್ಧನ್ ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ದೇಶವೇ ಸಂಭ್ರಮಿಸುತ್ತಿದ್ದು, ಮುಂದೆ ಕಾಶ್ಮೀರದಲ್ಲಿ ಹೆಚ್ಚೆಚ್ಚು ಅಭಿವೃದ್ದಿ ಕಾರ್ಯಕ್ರಮಗಳು ನಡೆಯಲಿದ್ದು ದೇಶವೇ ಇದನ್ನು ನೋಡಲಿದೆ ಎಂದರು.

ಆಯುಷ್ಮಾನ್ ಭಾರತ ಯೋಜನೆ ದೇಶಕ್ಕೆ ಸಂಜೀವಿನಿಯಾಗಿದ್ದು ದೇಶದಲ್ಲಿನ 50 ರಷ್ಟು ಬಡವರು ಯೋಜನೆಯ ಪಲಾನುಭವಿಗಳಾಗಿದ್ದು ಪ್ರಧಾನಿ ಮೋದಿಯವರು ಬಡವರ ಪಾಲಿನ ದೇವರು ಎಂದು ಮೋದಿಯ ಗುಣಗಾನ ಮಾಡಿದರು.

Share Post

Leave a Reply

Your email address will not be published. Required fields are marked *

error: Content is protected !!