ಸಿಎಂ ನೇಮಕಾತಿ ಆದೇಶ ವಿರೋಧಿಸಿ ಮತ್ತೆ ಉಲ್ಟಾ ಹೊಡೆದ ಬಿಜೆಪಿ ಜಿಲ್ಲಾಧ್ಯಕ್ಷ

ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದ ನಾಮನಿರ್ದೇಶಿತ ಸದಸ್ಯತ್ವ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇಮಕಾತಿ ಆದೇಶವನ್ನು ವಿರೋಧಿಸಿ ತಡೆ ಹಿಡಿಯುವಂತೆ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದಿದ್ದ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಇವತ್ತು ಉಲ್ಟಾ ಹೊಡೆದಿದ್ದಾರೆ.

ಮಂಡ್ಯ ಮನ್‌ಮುಲ್‌ನ 12 ಚುನಾಯಿತ ಸದಸ್ಯತ್ವ ಸ್ಥಾನಕ್ಕೆ ಕಳೆದ ಭಾನುವಾರ ಚುನಾವಣೆ ನಡೆದಿತ್ತು. ಸರ್ಕಾರದ ವತಿಯಿಂದ ಮೂವರನ್ನು ನಾಮ ನಿರ್ದೇಶಿತರನ್ನಾಗಿ ನೇಮಕ ಮಾಡಬಹುದಾಗಿದ್ದು, ಆ ಪೈಕಿ ಇಬ್ಬರು ಮನ್‌ಮುಲ್ ಅಧಿಕಾರಿಗಳು ಹಾಗೂ ಒರ್ವ ಪಕ್ಷದ ಕಾರ್ಯಕರ್ತರನ್ನು ನೇಮಿಸುವ ಅವಕಾಶ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಇತ್ತು. ಈ ನಿಟ್ಟಿನಲ್ಲಿ ಸಿಎಂ ಬಿಎಸ್‌ವೈ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನವಿ ಮೇರೆಗೆ ಕೃಷ್ಣ ಅವರ ಅಕ್ಕನ ಮಗ ಪ್ರಸನ್ನ ಎಂಬುವರನ್ನು ನೇಮಿಸಿದ್ರು. ಇದಕ್ಕೆ ಕೆಂಡಮಂಡಲರಾಗಿದ್ದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಪತ್ರ ಬರೆದು, ಆದೇಶ ತಡೆ ಹಿಡಿದು ಕಾರ್ಯಕರ್ತರಿಗೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದರು. ಇದು ಬಿ.ಎಸ್.ಯಡಿಯೂರಪ್ಪ ಆದೇಶವನ್ನು ಅವರದ್ದೇ ಪಕ್ಷದ ಒಬ್ಬ ಜಿಲ್ಲಾಧ್ಯಕ್ಷ ವಿರೋಧಿಸಿರುವುದು ಬಿಎಸ್‌ವೈ ತವರು ಮಂಡ್ಯ ಜಿಲ್ಲೆಯಲ್ಲೇ ಅವರಿಗೆ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿತ್ತು.

ಇದರಿಂದ ಕೆಂಡಮಂಡಲರಾದ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧ್ಯಕ್ಷ ನಾಗಣ್ಣಗೌಡಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗಿದ್ದು, ನಂತರ ನಾಗಣ್ಣಗೌಡ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆ ಆ ರೀತಿ ಇರಲಿಲ್ಲ. ಮಾಧ್ಯಮಗಳಲ್ಲಿ ಬರ್ತಿರುವ ಸುದ್ದಿ ಸುಳ್ಳು. ಉತ್ತಮರನ್ನು ಆಯ್ಕೆ ಮಾಡಲು ಮಾತುಕತೆ ನಡೆಸೋಣ, ಇಂತಹವರಿಗೆ ಕೊಡಿ ಅಥವಾ ಕೊಡಬೇಡಿ ಎಂದು ನಾನು ಹೇಳಿಲ್ಲ. ಸಿಎಂ ಆದೇಶವನ್ನು ಸ್ವಾಗತಿಸ್ತೀನಿ ಎಂದಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿರುವ ಮನ್ ಮುಲ್ ನ ನಾಮನಿರ್ದೇಶಿತ ಸದಸ್ಯ ಪ್ರಸನ್ನ, ಯಡಿಯೂರಪ್ಪಗೆ ಕೃತಜ್ನತೆ ಅರ್ಪಿಸಿದ್ರೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ್, ಪಕ್ಷದ ಹಿರಿಯ ಕಾರ್ಯಕರ್ತರಿಗೆ ಅವಕಾಶ ಕೊಡಬೇಕಿತ್ತು. ಆದರೆ ಪ್ರಸನ್ನ ಅವರಿಗೆ ಅವಕಾಶ ಕೊಟ್ಟಿರೋದು ನಮಗೇನು ಬೇಸರ ತಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಮಂಡ್ಯ ಹಾಲು ಒಕ್ಕೂಟದ ಸದಸ್ಯರಾಗಬೇಕೆಂದು ಕನಸು ಕಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರಿಗೆ ತಣ್ಣೀರೆರಚಿ ವಲಸಿಗರಿಗೆ ಯಡಿಯೂರಪ್ಪ ಮಣೆ ಹಾಕಿರೋದು ಮೂಲ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆ ಆಡೋದಕ್ಕೆ ಕಾರಣವಾಗಿರೋದಂತು ಸತ್ಯ.

  • ಸಂತೋಷ್‌ ಕುಮಾರ್ ದಿ ನ್ಯೂಸ್ 24 ಕನ್ನಡ – ಮಂಡ್ಯ
Share Post

Leave a Reply

Your email address will not be published. Required fields are marked *

error: Content is protected !!