ಬೆಂಗಳೂರಲ್ಲಿ 2 ಕೊಲೆ : ಮೊಬೈಲ್ ಜಗಳಕ್ಕೆ ಪ್ರಾಣವೇ ಹೋಯ್ತು..!

# ಜಗಳ ಪ್ರಶ್ನಿಸಲು ಹೋಗಿ ಜೀವ ಬಿಟ್ಟಳು :

ಬೆಂಗಳೂರು- ನಿದ್ರೆಗೆ ಭಂಗವಾಗುತ್ತಿದೆ ಎಂದು ನೆರೆಮನೆಯ ದಂಪತಿ ಜಗಳನ್ನು ಪ್ರಶ್ನಿಸಲು ಹೋದ ಮಹಿಳೆ ಕೊಲೆಯಾಗಿ ಚಿರನಿದ್ರೆಗೆ ಜಾರಿರುವ ದಾರುಣ ಘಟನೆ ರಾತ್ರಿ ಜೆಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಳೇಗುಡ್ಡದ ಹಳ್ಳಿ, ಜನತಾ ಕಾಲೋನಿಯ 2ನೇ ಮುಖ್ಯರಸ್ತೆ, 2ನೇ ಕ್ರಾಸ್ ನಿವಾಸಿ ಲಲಿತಮ್ಮ(50) ಕೊಲೆಯಾದ ಮಹಿಳೆ. ..

ಲಲಿತಮ್ಮ ಅವರು ಒಬ್ಬರೇ ವಾಸವಾಗಿದ್ದರು. ತಡರಾತ್ರಿ 11.45ರ ಸುಮಾರಿನಲ್ಲಿ ನೆರೆಮನೆಯ ನಿವಾಸಿ ಮಂಜುನಾಥ ಮತ್ತು ಸುನಂದಾ ಜಗಳವಾಡುತ್ತಿದ್ದಾಗ ಲಲಿತಮ್ಮ ಅವರಿಗೆ ಎಚ್ಚರವಾಗಿದೆ. ಇದರಿಂದ ಸಿಟ್ಟಾದ ಲಲಿತಮ್ಮ ಎದ್ದು ಮಂಜುನಾಥ್ ಮನೆ ಬಳಿ ಹೋಗಿ ನಿಮ್ಮ ಜಗಳದಿಂದ ನನಗೆ ನಿದ್ದೆ ಬರುತ್ತಿಲ್ಲ ತೊಂದರೆಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಲಲಿತಮ್ಮ ಅವರ ಮಾತಿನಿಂದ ಕೋಪಗೊಂಡ ಮಂಜುನಾಥ್ ನಿನ್ನಂದಲೇ ಬೇರೆಯವರಿಂದ ಮಾತು ಕೇಳುವಂತಾಗಿದೆ ಎಂದು ಪತ್ನಿಗೆ ಬೈದು ಕೈಗೆ ಸಿಕ್ಕ ಕಲ್ಲನ್ನು ಪತ್ನಿ ಕಡೆ ಬಲವಾಗಿ ಬೀಸಿದ್ದಾನೆ.

ಆ ಕಲ್ಲು ಗುರಿ ತಪ್ಪಿ ಲಲಿತಮ್ಮನವರ ತಲೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಲಲ್ಲಿತಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಜೆಜೆನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

#ಮೊಬೈಲ್ ಜಗಳ, ಪ್ರಾಣವೇ ಹೋಯ್ತು..


ಬೆಂಗಳೂರು- ಮೊಬೈಲ್ ವಿಚಾರವಾಗಿ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ತುಮಕೂರಿನ ಮೆಹಬೂಬ್(30) ಕೊಲೆಯಾದ ಯುವಕ. ಈತ ರಸ್ತೆಬದಿ ವ್ಯಾಪಾರಿಯಾಗಿದ್ದು,ನಿನ್ನೆ ಮಧ್ಯಾಹ್ನ 3.15ರ ಸುಮಾರಿನಲ್ಲಿ ಸಿಟಿ ಮಾರ್ಕೆಟ್‍ನ
ಬಿಎಂಟಿಸಿ ಬಸ್ ನಿಲ್ದಾಣದಲ್ಲಿದ್ದಾಗ ಪರಿಚಯವಿದ್ದ ಆಟೋ ಚಾಲಕ ಮತ್ತು ಅಡುಗೆ ಭಟ್ಟ ಇಬ್ಬರೂ ಬಂದಿದ್ದಾರೆ.

ಈ ಸಂದರ್ಭದಲ್ಲಿ ಇವರಿಗೆ ತಾನು ಕೊಟ್ಟಿದ್ದ ಮೊಬೈಲ್ ಕೊಡುವಂತೆ ಮೆಹಬೂಬ್ ಕೇಳಿದಾಗ ಇವರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಆ ಸಂದರ್ಭದಲ್ಲಿ ಮೆಹಬೂಬ್‍ಗೆ ಇವರು ಚಾಕುವಿನಿಂದ ಚುಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ರಾತ್ರಿ 9 ಗಂಟೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!