ಶಾಲಾ ಮಕ್ಕಳ ಮೇಲೆ ಬೀಳುತ್ತಿವೆ ಕಲ್ಲುಗಳು : ಗ್ರಾಮಸ್ಥರಲ್ಲಿ ಆತಂಕ

ಬಾಗಲಕೋಟೆ : ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಸಮೀಪದ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಚಿತ್ರವಾದ ಘಟನೆ ವರದಿಯಾಗಿದೆ.

ಶಾಲೆಯಲ್ಲಿ ಮಕ್ಕಳ ಮೇಲೆ ಕಳೆದೊಂದು ತಿಂಗಳಿನಿಂದ ಅದೃಶ್ಯವಾಗಿ ಕಲ್ಲುಗಳು ಬೀಳುತ್ತಿದ್ದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಪ್ರತಿನಿತ್ಯ ಪಾಠ ಮಾಡುವ ಸಮಯದಲ್ಲಿ ಮಕ್ಕಳ ಹಾಗೂ ಶಿಕ್ಷಕರ ಮೇಲೆ ಕಲ್ಲುಗಳು ಬೀಳುತ್ತಿವೆ. ಈ ವಿಷಯದ ಕುರಿತು ಗ್ರಾಮಸ್ಥರಿಗೆ ತಿಳಿಸಿದಾಗ ಶಾಲೆಯ ಕೊಠಡಿಯಲ್ಲಿ ಮಕ್ಕಳು ಹಾಗೂ ಶಿಕ್ಷಕರನ್ನು ಇರಲು ತಿಳಿಸಿ ಬಾಗಿಲು, ಕಿಟಕಿಯನ್ನು ಹಾಕಿ ಹೊರಗಡೆ ಯಾರಾದರೂ ಕಲ್ಲು ಎಸೆಯುತ್ತಾರೆಯೇ ಎಂದು ಗಮನಿಸಲಾಯ್ತು. ಆದ್ರೆ ಇಲ್ಲೂ ಸಂಗತಿ ಬಯಲಾಗಲಿಲ್ಲ.

ಕೊಠಡಿಯಲ್ಲಿ ಹಾಗು ಮಕ್ಕಳು ಮನೆಗೆ ಹೋಗುವಾಗ, ಶೌಚಾಲಯಕ್ಕೆ ಹೋಗುವಾಗ ಕಲ್ಲು ಬೀಳುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಶಾಲೆಯಲ್ಲಿ ಒಟ್ಟು 24ಕ್ಕೂ ಹೆಚ್ಚು ಮಕ್ಕಳಿದ್ದು, ಕಲ್ಲುಗಳು ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಬೀಳುತ್ತಿವೆಯಂತೆ.

ಗ್ರಾಮಸ್ಥರು ಕಲ್ಲು ಬೀಳುತ್ತಿರುವುದನ್ನು ಕಂಡು ಬಾನಾಮತಿ ಕಾಟ ಇರುಬಹುದೆಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕಿಡಿಗೇಡಿಗಳ ಕೃತ್ಯವನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ಮತ್ತು ಪೊಲೀಸ್​​ ಠಾಣೆಗೆ ದೂರು ನೀಡಲಾಗಿದೆ. ಆದ್ರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!