ಕೊಳ್ಳೇಗಾಲ : ಸೂರಾಪುರ ಗ್ರಾಮದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಸಲಹೆ

ಕೊಳ್ಳೇಗಾಲ : ತಾಲ್ಲೂಕಿ‌ನ ಸೂರಾಪುರ ಗ್ರಾಮ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಸಾವಿರಾರು ಮನೆಗಳಿವೆ. ಅತಿ ಹೆಚ್ಚು ಜನಸಂಖ್ಯೆ ಇದ್ದು ಇಲ್ಲಿ ನೂತನವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಮುಡಿಗುಂಡ ವಿರಕ್ತಮಠದ ಶ್ರೀಕಂಠಸ್ವಾಮೀಜಿ ಮನವಿ ಮಾಡಿದರು.

ತಾಲ್ಲೂಕಿನ ಕುಣಗಳ್ಳಿ ಸೂರಾಪುರ ಗ್ರಾಮ ವ್ಯಾಪ್ತಿಯಲ್ಲಿ ಎನ್.ಮಹೇಶ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಣಗಳ್ಳಿ ಮತ್ತು ಸೂರಾಪುರ ಎರಡು ಗ್ರಾಮಗಳು ಸೇರಿ ಅತಿ ಹೆಚ್ಚು ಜನ ವಾಸಿಸುತ್ತಿದ್ದು ಇದುವರೆಗೂ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ನೂತನ ಆರೋಗ್ಯ ಕೇಂದ್ರ ನಿರ್ಮಿಸಿದರೆ ಸುತ್ತಮುತ್ತಲ ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ ಎಂದು ಅವರು ಶಾಸಕರಲ್ಲಿ ಮನವಿ ಮಾಡಿದರು.

ಇಲ್ಲಿ ನಡೆಯುತ್ತಿರು ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರಿಂದ ಎಲ್ಲಾ ರೀತಿಯ ತಪಾಸಣೆಗಳನ್ನು ಮಾಡಲಾಗುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಶಾಸಕ ಎನ್.ಮಹೇಶ್ ಮಾತನಾಡಿ ಬಹಳ ದಿನಗಳಿಂದ ಇಲ್ಲಿ ಆರೋಗ್ಯ ಶಿಬಿರ ಆಯೋಜಿಸುವ ಬಯಕೆಯಿತ್ತು. ಈಗ ಅದು ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿ ತಿಂಗಳು ಒಂದೊಂದು ಗ್ರಾಮದಲ್ಲಿ ಶಿಬಿರ ಆಯೋಜಿಸಲಾಗುತ್ತದೆ. ತಿಂಗಳಲ್ಲಿ ಒಂದು ಭಾನುವಾರ ಶಿಬಿರಕ್ಕೆ ಸಹಕಾರ ನೀಡುವಂತೆ ನಮ್ಮ ಕ್ಷೇತ್ರದ ವೈದ್ಯರಲ್ಲಿ ಕೇಳಿಕೊಂಡಿದ್ದೇನೆ. ಎಲ್ಲರೂ ಒಪ್ಪಿದ್ದಾರೆ ಎಂದರು.

ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಹಾಗಾಗಿ ಗ್ರಾಮಗಳಲ್ಲಿ ಶಿಬಿರ ಆಯೋಜಿಸಿ ಆರೋಗ್ಯದ ಕಡೆ ಗಮನ ಹರಿಸುವಂತೆ ಅರಿವು ಮೂಡಿಸುವಿದೇ ಶಿಬಿರದ ಉದ್ದೇಶ ಎಂದು ಹೇಳಿದರು.

ಶಿಬಿರದಲ್ಲಿ ಒಟ್ಟು 990 ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು. ಇವರ ಪೈಕಿ 180 ಮಂದಿ ಕಣ್ಣಿನ ಪರೀಕ್ಷೆಗೆ ಒಳಗಾದರು. 15 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಅವರನ್ನು ತಮಿಳುನಾಡಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸಲಾಯಿತು.

ವೇದಿಕೆಯಲ್ಲಿ ಬಿಎಸ್ಪಿ ಅಧ್ಯಕ್ಷ ಸ್ವಾಮಿನಾಯಕ್, ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿಲಿಂಗರಾಜು, ಬಿಎಸ್ಪಿ ರಾಜ್ಯ ಪ್ರ.ಕಾರ್ಯದರ್ಶಿ ಮಾದೇಶ್‌ಉಪ್ಪಾರ್, ಜಿಲ್ಲಾ ಪ್ರ.ಕಾರ್ಯದರ್ಶಿ ರಾಜೇಂದ್ರ, ಕ್ಷೇತ್ರ ಉಸ್ತುವಾರಿ ಸಿದ್ದರಾಜು, ಕಾರ್ಯದರ್ಶಿ ಜಗದೀಶ್, ಬ್ಲಾಕ್ ಉಸ್ತುವಾರಿ ವಿಜಯ್‌ರಾಜ್, ವಿ.ಚಿಕ್ಕಣ್ಣೇಗೌಡ, ಡಾ.ರವಿಕುಮಾರ್, ಡಾ.ಎಂ.ಶಿವಕುಮಾರ್, ಡಾ.ಶ್ಯಾಮ್‌ಕುಮಾರ್ ಹಾಜರಿದ್ದರು‌.

Share Post

Leave a Reply

Your email address will not be published. Required fields are marked *

error: Content is protected !!