ಪತ್ನಿ ಮೇಲೆ ಪತಿಯಿಂದ ಮನಬಂದಂತೆ ಹಲ್ಲೆ

ಸಕಲೇಶಪುರ : ತಡವಾಗಿ ಮನೆಗೆ ಬರುತ್ತಿದ್ದ ಗಂಡನನ್ನು ಪ್ರಶ್ನೆ ಮಾಡಿದ ಹೆಂಡತಿಯ ಮೇಲೆ ಮನಬಂದಂತೆ ಥಳಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ರಾಜೇಂದ್ರ ಪುರದ ರಾಜೇಶ್ (38) ಹಲ್ಲೆ ಮಾಡಿದ ಆರೋಪಿಯಾಗಿದ್ದು, ರಾತ್ರಿ ವೇಳೆ ಮನೆಗೆ ತಡವಾಗಿ ಬರುತ್ತಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಮೈಮೇಲೆ ರಕ್ತ ಹೆಪ್ಪುಗಟ್ಟುವ ಹಾಗೆ ಬಾಸುಂಡೆಗಳು ಬರುವ ರೀತಿ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಸದ್ಯ ತಲೆಮರೆಸಿಕೊಂಡಿದ್ದಾನೆ.

ಇನ್ನು ಅರಕಲಗೂಡು ತಾಲೂಕಿನ ಬೆಮ್ಮತ್ತಿ ಗ್ರಾಮದ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ರಾಜೇಶ್ ನಿಗೆ 2002ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಇಬ್ಬರು ಮಕ್ಕಳು ಸಹ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆ ಬದಲಾಗುತ್ತಾ ಪ್ರತಿದಿನ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದ. ಈ ಬಗ್ಗೆ ಹೆಂಡತಿ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿಯ ಮೇಲೆ ಅನುಮಾನಗೊಂಡ ಗಂಡ ತಾನೇ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದೀಯಾ ಅಂತ ಮನಬಂದಂತೆ ತಳಿಸಿದ್ದಾನೆ.

ಈಗಾಗಲೇ ಹಲವು ಬಾರಿ ಹೆಂಡತಿ ಮೇಲೆ ಹಲ್ಲೆ ನೆಡೆಸಿದ್ದಾನೆ. ಸಂಬಂಧಿಕರು ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಹಲವಾರು ಬಾರಿ ರಾಜೇಶನಿಗೆ ಬುದ್ಧಿವಾದ ಹೇಳಿದರೂ ಕೂಡ ಮಾತು ಕೇಳದ ರಾಜೇಶ್ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿ ಪ್ರತಿ ರಾತ್ರಿ ಹೆಂಡತಿಗೆ ಮನಬಂದಂತೆ ಥಳಿಸ ತೊಡಗಿದ್ದಾನೆ.

ಸೌಮ್ಯ ಅವರ ತಾಯಿ ಮಾಧ್ಯಮಗಳೆದುರು ಮಾತನಾಡಿ, ನನ್ನ ಮಗಳನ್ನು ಮದುವೆ ಮಾಡಿ ಕೊಡುವಾಗ ರಾಜೇಶನಿಗೆ ವರದಕ್ಷಿಣೆ ರೂಪದಲ್ಲಿ ಹಣ ಒಡವೆಗಳನ್ನು ನೀಡಿದ್ದೇವೆ. ಆದರೂ ಕೂಡ ಪದೇ ಪದೇ ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ನನ್ನ ಮಗಳನ್ನು ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ನಾನು ಕಳೆದ ಮೂರು ತಿಂಗಳಿನಿಂದ ನನ್ನ ಮಗಳ ಮನೆಯಲ್ಲೇ ಇದ್ದೆ. ಊರಿನಲ್ಲಿ ಕೆಲಸ ಇದ್ದಿದ್ದರಿಂದ ಒಂದು ವಾರಗಳ ಕಾಲ ಊರಿಗೆ ಹೋಗಿದ್ದ ಸಮಯದಲ್ಲಿ ಮಗಳ ಮೇಲೆ ಸಾಯುವ ಹಾಗೆ ಹೊಡೆದಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಗಂಡನ ಈ ಪೈಶಾಚಿಕ ಕೃತ್ಯಕ್ಕೆ ನಲುಗಿ ಹೋಗಿರುವ ಮಹಿಳೆ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿದ್ದಾಳೆ. ಇನ್ನು ಗಂಡನಿಂದ ಬೇಸತ್ತು ಹಲ್ಲೆಗೊಳಗಾಗಿದ್ದ ಮಹಿಳೆ ಸದ್ಯ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜೇಶನ ಬೆಂಬಲಿಗರು ಪೋಲೀಸರ ಮೇಲೆ ಒತ್ತಡ ತಂದು ಪೊಲೀಸರು ಆತನನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಈಕೆಯ ಆರೋಪವಾಗಿದ್ದು ತಕ್ಷಣ ನನಗೆ ನ್ಯಾಯಕೊಡಿಸಿ ಕೊಡಿ ಅಂತ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!