ಕ್ಷೇತ್ರದಲ್ಲಿ ಶಾಸಕರಿಲ್ಲ : ಜನರ ಪಾಡು ಕೇಳೋರಿಲ್ಲ

ರಾಯಚೂರು : ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿಂದ ಶಾಸಕರಿಲ್ಲದೆ ಹೇಳೋರು ಕೇಳೋರು ಇಲ್ಲದಂತಾಗಿ ಜನರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಸಕರಿಗೆ ಇದ್ಯಾವುದರ ಪರಿವೇ ಇಲ್ಲದಂತಾಗಿದೆ.

ಕ್ಷೇತ್ರದಲ್ಲಿ ಅನೇಕ ರೀತಿಯ ಸಮಸ್ಯೆಗಳಿಂದ ಜನರು ಪರಿತಪಿಸುತ್ತಿದ್ದಾರೆ. ಅಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೂಕ್ತ ಬಸ್ ಸೌಕರ್ಯವಿಲ್ಲದೆ ದಿನನಿತ್ಯ ಕಂಗೆಡುವಂತಾಗಿದೆ.

ಹಳ್ಳಿಗಳಿಗೆ ಬರುವ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಪರೂಪಕ್ಕೆ ಬರುವ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೂಕಾಟದಿಂದ ತುಂಬಿ ತುಳುಕುತ್ತಾರೆ.

ಕಾಲೇಜಿಗೆ ತಡವಾಗಿ ಹೋದರೆ ತರಗತಿಯಲ್ಲಿ ಬಹಿಷ್ಕಾರ ಹಾಕುವ ಭೀತಿಯಿಂದ ವಿದ್ಯಾರ್ಥಿಗಳು ಸಕ್ಕಿದ ಬಸ್ಸಿನಲ್ಲೇ ಜೀವವನ್ನು ಕೈಯಲ್ಲಿಟ್ಟುಕೊಂಡು ಪ್ರಯಾಣಿಸಿತ್ತಿದ್ದಾರೆ.

ಮುಖ್ಯ ಕಾಲುವೆಯಿಂದ ಬರುವ ದಾರಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಹಳ್ಳಿ ಮಾರ್ಗಗಳ ಮೂಲಕ ಬಸ್ಸು ಬರುತ್ತದೆ. ಇರುವುದೊಂದೇ ಬಸ್ಸು ತಪ್ಪಿದರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ತೊಂದರೆ ಆಗುತ್ತಿದೆ. ಆದರೆ ಯಾರೂ ಸಹ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಡಿಪೋ ವ್ಯವಸ್ಥಾಪಕರು ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.

ಅತ್ತ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಜನರನ್ನು ಮರೆತು ರೆಸಾರ್ಟ್ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಹೀಗಾದರೆ ಕ್ಷೇತ್ರದ ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳುವುದು ಯಾರಿಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇನ್ನಾದರೂ ಶಾಸಕರು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕಾಗಿದೆ.

  • ಮಂಜುನಾಥ್ ಉಪ್ಪಾರ್, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!