ಪಾಕ್ ಮಣಿಸಿ ಸೇಡು ತೀರಿಸಿಕೊಂಡ ಭಾರತ..!

ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಓಟ ಮುಂದುವರಿದಿದೆ. ಬದ್ದವೈರಿಗಳ ವಿರುದ್ಧ ಭಾರತ ಡಕ್‌ ವರ್ತ್ ನಿಯಮದ ಪ್ರಕಾರ  89 ರನ್ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಸತತ 7ನೇ ಬಾರಿ ಪಾಕಿಸ್ತಾನ ವಿರುದ್ಧ ಗೆಲವು ಸಾಧಿಸಿದೆ. ಇಷ್ಟೇ ಅಲ್ಲ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಆರಂಭದಲ್ಲಿ 336 ರನ್ ಬೃಹತ್ ಟಾರ್ಗೆಟ್ ಪಡೆದ ಪಾಕಿಸ್ತಾನ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇಮಾಮ್ ಉಲ್ ಹಕ್ 7 ರನ್ ಸಿಡಿಸಿ ವಿಜಯ್ ಶಂಕರ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಕಬಳಿಸಿದ ಸಂಭ್ರಮಿಸಿದ ಟೀಂ ಇಂಡಿಯಾಗೆ ಫಕಾರ್ ಜಮಾನ್ ಹಾಗೂ ಬಾಬರ್ ಅಜಂ ತಲೆನೋವಾಗಿ ಪರಿಣಮಿಸಿದರು. ಇವರಿಬ್ಬರ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು.

2ನೇ ವಿಕೆಟ್‌ಗೆ ಈ ಜೋಡಿ 104 ರನ್ ಜೊತೆಯಾಟ ನೀಡೋ ಮೂಲಕ ಪಾಕ್ ತಂಡಕ್ಕೆ ಆಸರೆಯಾದರು. 48 ರನ್ ಸಿಡಿಸಿ ಮುನ್ನಗ್ಗುತ್ತಿದ ಬಾಬರ್ ಅಜಂಗೆ ಕುಲ್ದೀಪ್ ಯಾದವ್ ಶಾಕ್ ನೀಡಿದರು. ಅರ್ಧಶತಕ ಸಿಡಿಸಿ ಭಾರತಕ್ಕೆ ಅಪಾಯದ ಸೂಚನೆ ನೀಡಿದ ಫಕಾರ್ ಜಮಾನ್ 62 ರನ್ ಸಿಡಿಸಿ ಔಟಾದರು. ಈ ಮೂಲಕ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿತು.

ಕುಲ್ದೀಪ್ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ದಾಳಿ ಆರಂಭಿಸಿದರು. ಮೊಹಮ್ಮದ್ ಹಫೀಜ್ ಹಾಗೂ ಶೋಯಿಬ್ ಮಲಿಕ್ ಬಂದ ಹಾಗೆ ಪೆವಿಲಿಯನ್ ಕಳುಹಿಸಿದರು.  ಈ ಮೂಲಕ ಭಾರತಕ್ಕೆ ಪಾಂಡ್ಯ ಭರ್ಜರಿ ಯಶಸ್ಸು ತಂದುಕೊಟ್ಟರು. ಸರ್ಫರಾಜ್ ಅಹಮ್ಮದ್ ಹಾಗೂ ಇಮಾದ್ ವಾಸಿಮ್ ತಿರುಗೇಟು ನೀಡೋ ಪ್ರಯತ್ನ ಮಾಡಿದರು. ಆದರೆ ಸರ್ಫರಾಜ್ 12 ರನ್ ಸಿಡಿಸಿ ಔಟಾದರು. 

ಪಾಕಿಸ್ತಾನ 35 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಸಿಡಿಸಿ ಸೋಲಿನತ್ತ ಹೆಜ್ಜೆ ಹಾಕಿತ್ತು. ಅಷ್ಟರಲ್ಲೇ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಸಮಯ ವ್ಯರ್ಥವಾದ ಕಾರಣ ಡಕ್‌ವರ್ತ್ ನಿಯಮದ ಪ್ರಕಾರ ಪಂದ್ಯವನ್ನು 40 ಓವರ್‌ಗಳಿಗೆ ಸೀಮಿತಗೊಳಿಸಿ ಪಾಕಿಸ್ತಾನಕ್ಕೆ 302 ರನ್ ಟಾರ್ಗೆಟ್ ನೀಡಲಾಯಿತು. ಹೀಗಾಗಿ ಪಾಕ್‌ಗೆ 5 ಓವರ್‌ಗಳಲ್ಲಿ 136 ರನ್ ಅಸಾಧ್ಯ ಗುರಿ ಪಡೆಯಿತು. 

ಇಮಾದ್ ವಾಸಿಮ್ ಹಾಗೂ ಶದಬ್ ಖಾನ್ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ಪಾಕಿಸ್ತಾನ 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ212 ರನ್ ಸಿಡಿಸಿತು. ಈ ಮೂಲಕ ಟೀಂ ಇಂಡಿಯಾ 89 ರನ್ ಗೆಲುವು ಸಾಧಿಸಿತು. ಭಾರತೀಯ ಸೇನೆಯ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನಕ್ಕೆ ಇದೀಗ ಟೀಂ ಇಂಡಿಯಾ ಗ್ರೌಂಡ್‌ಸ್ಟ್ರೈಕ್ ಮೂಲಕ ತಕ್ಕ ಉತ್ತರ ನೀಡಿದೆ. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಹಿಂದಿಕ್ಕಿ 3ನೇ ಸ್ಥಾನಕ್ಕೇರಿತು.
 

Share Post

Leave a Reply

error: Content is protected !!