ಮಾಯಕ್ಕ ದೇವಿಯಿಂದ ಸಂಹಾರವಾದ ರಾಕ್ಷಸರಿಗಾಗಿ ಜಾತ್ರೆ,ಹೋಳಿಗೆ ಮಾಡಿ ಸಂಭ್ರಮ..!

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಹೋಳಿಗೆ ಜಾತ್ರೆ ಸ್ಥಳೀಯವಾಗಿ ಬಹಳ ಜನಪ್ರಿಯವಾಗಿದೆ.

ಈ ಜಾತ್ರೆ ಹಿಂದೆ ಒಂದು ಪೌರಾಣಿಕ ಇತಿಹಾಸವೇ ಇದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಶಕ್ತಿ ದೇವತೆ ಮಾಯಕ್ಕಾದೇವಿಯು ಸಂಹಾರ ಮಾಡಿದ ಕೀಲ ಮತ್ತು ಕಟ್ಟರೆಂಬ ರಾಕ್ಷಸರಿಗಾಗಿ ಮಾಡುವ ಜಾತ್ರೆ‌ ಇದು.

ಚಿಂಚಲಿ ಗ್ರಾಮದ ಜಾತ್ರೆ ವೇಳೆ ಭಕ್ತಾದಿಗಳು ಒಟ್ಟಿಗೆ ದೇವಸ್ಥಾನದ ಬಳಿ ಸೇರಿ ನಂತರ ದೇವಸ್ಥಾನದ ಮುಂದೆ ಒಲೆ ಹೂಡಿ ಮಹಿಳೆಯರಲ್ಲಾ ಹೋಳಿಗೆ ಮಾಡುವುದರ ಮೂಲಕ ರಾಕ್ಷಸರ ಜಾತ್ರೆ ಮಾಡುತ್ತಾರೆ.

ರಾಕ್ಷಸರ ಜಾತ್ರೆಯ ಪೌರಾಣಿಕ ಹಿನ್ನಲೆ :

ಕೀಲ ಮತ್ತು ಕಟ್ಟರೆಂಬ ರಾಕ್ಷಸರು ಘೋರ ತಪ್ಪಸ್ಸು ಮಾಡಿ ದೇವರನ್ನ ಮೆಚ್ಚಿಸಿ ನಮಗೆ ಯಾವ ಪ್ರಾಣಿ-ಪಕ್ಷಿ,ಗಂಡು-ಹೆಣ್ಣು ಹಾಗೂ ಹಗಲು- ರಾತ್ರಿಯಲ್ಲಿ ಸಾವು ಬರಬಾರದು ಎಂದು ವರ ಪಡೆದು ಎಲ್ಲರಿಗೂ ಅತಿಯಾದ ಹಿಂಸೆ ನೀಡಲು ಪ್ರಾರಂಭಿಸುತ್ತಾರೆ. ಆಗ ಎಲ್ಲ ದೇವತೆಗಳು ಮಹಾವಿಷ್ಣುವಿನ ಮೊರೆ ಹೋದಾಗ ವಿಷ್ಣು ಸಾಕ್ಷಾತ್ ಅರ್ಧನಾರೀಶ್ವರ ಅವತಾರ ತಾಳಿ ಮಾಯಕ್ಕ(ಮಾಯಾ)ದೇವಿಯಾಗ್ತಾಳೆ. ಭಕ್ತರ ಕಷ್ಟ ಪರಿಹಾರಕ್ಕಾಗಿ ಮಾಯಕ್ಕದೇವಿಯು ಇಬ್ಬರು ರಾಕ್ಷಸರನ್ನ ಚಿಂಚಲಿಗೆ ಕರೆದು ತರುತ್ತಾಳೆ. ದೇವಿ ರೂಪ ತಾಳಿ ಕೀಲ-ಕಟ್ಟರು ಹಾಗೂ ಮಾಯಕ್ಕದೇವಿಯ ನಡುವೆ ಯುದ್ಧ ನಡೆಯುತ್ತದೆ. ನಂತರ ಹಗಲು-ರಾತ್ರಿ ಮಧ್ಯ ಮಾಯಕ್ಕದೇವಿಯು ತನ್ನ ಮೂಲ ಅರ್ಧನಾರೀಶ್ವರ ರೂಪ ತಾಳಿ ರಾಕ್ಷಸರನ್ನ ಸಂಹಾರ ಮಾಡ್ತಾಳ. ಆದರೆ ಆಗಲೂ ರಾಕ್ಷಸರು ತಮ್ಮ ಪ್ರಾಣ ಬಿಡುವುದಿಲ್ಲ,ತಮ್ಮ ಕೊನೆಯ ಬೇಡಿಕೆ ಈಡೇರಿಸಿದ್ರೆ ಮಾತ್ರ ತಾವು ಪ್ರಾಣ ಬಿಡುವುದಾಗಿ ದೇವಿಗೆ ತಿಳಿಸುತ್ತಾರೆ.

ಆ ರಾಕ್ಷರಿಬ್ಬರ ಬೇಡಿಕೆ?:

ರಾಕ್ಷಸರು ತಾವು ಪ್ರಾಣ ಬಿಡಬೇಕೆಂದ್ರೆ ತಮ್ಮ ಮದುವೆ ಮಾಡಬೇಕು ಹಾಗೂ ಬೆಂಕಿ ಇಲ್ಲದೇ ಅಡುಗೆ ಮಾಡಿ ಎಲ್ಲಾ ಜನರನ್ನು ಕೂಡಿಸಿ ಅವರಿಗೆ ಪ್ರತಿ 3 ವರ್ಷಗಳಿಗೊಮ್ಮೆ ಊಟ ಬಡಿಸಿ ನಮ್ಮನ್ನು ಸ್ಮರಿಸಬೇಕೆಂದು ಕೇಳಿಕೊಂಡರು. ಮಾತಿಗೆ ತಪ್ಪಿದ್ದರೆ ಭಕ್ತರಿಗೆ ಕಷ್ಟ ತೊಂದರೆ ಕೊಡುವುದಾಗಿ ಷರತ್ತು ಹಾಕಿದರು. ಅವರ ಅಪೇಕ್ಷೆಯಂತೆ ಅವರ ಆಸೆ ತೀರಿಸುವುದಾಗಿ ವಚನ ನೀಡಿ ಪ್ರಾಣ ಬಿಡುವಂತೆ ಮಾಯಕ್ಕದೇವಿ ಕೇಳಿಕೊಂಡಳಂತೆ. ನಂತರ ಮಾಯಕ್ಕದೇವಿಯು ಭಕ್ತರೆಲ್ಲರನ್ನು ಕರೆಸಿ, ಮದುವೆಯ ಉತ್ಸವದಂತೆ ಹಾಲುಗಂಬ ನೆಟ್ಟು,ಹಂದರ ಹಾಕಿ 4 ರಂಜನಿಗೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ಮಾಡಿ ಬಂದ ಭಕ್ತರಿಗೆ ಊಟ ಬಡಿಸಿದಳು. ರಂಜನಿಗೆಗಳನ್ನು ಎರಡು ಸ್ಥಳಗಳಲ್ಲಿ ಇಟ್ಟು ದೈತ್ಯ ರಾಕ್ಷಸರ ಆಸೆ ನೆರವೇರಿಸಿ ತೃಪ್ತಿ ಪಡಿಸಿದಳು. 

ಅಂದಿನಿಂದ ಇಂದಿನವರೆಗೂ ಪ್ರತಿ 3 ವರ್ಷಕ್ಕೊಮ್ಮೆ ರಾಕ್ಷಸರ ಬೇಡಿಕೆಯನ್ನ 3 ದಿನಗಳವರಗೆ ಜಾತ್ರೆ ರೂಪದಲ್ಲಿ ನೆರವೇರುತ್ತದೆ. ಇನ್ನು ಈ ಜಾತ್ರೆಯ ವಿಶೇಷವೆಂದರೆ ಜಾತ್ರೆಯ 3 ದಿನಗಳಂದು ಗ್ರಾಮಸ್ಥರು ತಮ್ಮ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಸ್ವಯಂ ಪ್ರೇರಿತವಾಗಿ ಗ್ರಾಮದ ಎಲ್ಲ ಸ್ತ್ರೀ,ಪುರುಷರು ಗ್ರಾಮದ ನಡುವಿನ ಕೀಲಕಟ್ಟೆಯ ಹತ್ತಿರ ಮೊದಲ ದಿನ ಹೋಳಿಗೆ,ಎರಡನೆಯ ದಿನ ಹುಗ್ಗಿ ಮತ್ತು ಮೂರನೇ ದಿನ ಅನ್ನ ಸಾರು ಮಾಡಿ ತಾವು ಪ್ರಸಾದ ಸ್ವೀಕರಿಸಿ ಬಂದ ಭಕ್ತಾದಿಗಳಿಗೆ ನೀಡುತ್ತಾರೆ.

Share Post

Leave a Reply

Your email address will not be published. Required fields are marked *

error: Content is protected !!