ಮಹಾರಾಷ್ಟ್ರದ ರಾಜಾಪುರ ಅಣೆಕಟ್ಟೆಯಿಂದ ಹಠಾತ್ತಾಗಿ ನೀರು ಬಿಡುಗಡೆ

ಕಾಗವಾಡ : ಮಳೆಗಾಲ ಆರಂಭವಾಗುವ ಮೊದಲು ಅನಿವಾರ್ಯವಾಗಿ ಬಿಡಲೇಬೇಕಾದ ಸಂಗ್ರಹಿತ ನೀರನ್ನು ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಶನಿವಾರ ಬೆಳಿಗ್ಗೆ ನೀರು ಬಿಡುಗಡೆ ಮಾಡಲಾಗಿದೆ.

ಅಣೆಕಟ್ಟಿನ ಒಟ್ಟು 62 ಗೇಟ್ ಗಳ ಪೈಕಿ 14 ಗೇಟುಗಳನ್ನು ತೆರೆಯಲಾಗಿದ್ದು ಅಂದಾಜು 1200 ರಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿದೆ. ಕೆಲದಿನಗಳ ಹಿಂದೆಯೂ ಇದೇ ಆಣೆಕಟ್ಟೆಯ 9 ಗೇಟುಗಳನ್ನು ತೆರೆದು ಬಿಡುಗಡೆ ಮಾಡಿದ ನೀರು ಚಿಕ್ಕೋಡಿ ತಾಲೂಕಿನ ಮಾಂಜರಿ,ಅಂಕಲಿ,ಚಂದೂರು,ಎಡೂರು,ಕಲ್ಲೋಳ ಗ್ರಾಮಗಳನ್ನು ತಲುಪಿದೆ.

      ಇಂದು ಬಿಡುಗಡೆಯಾದ ನೀರು ಚಿಕ್ಕೋಡಿಯ ಈ ಗ್ರಾಮಗಳ ಮೂಲಕವೇ ಹರಿದು ಕಾಗವಾಡ,ರಾಯಬಾಗ ಮತ್ತು ಅಥಣಿ ತಾಲೂಕುಗಳ ಗ್ರಾಮಗಳನ್ನು ತಲುಪಬೇಕು. ರಾಯಬಾಗ ತಾಲೂಕಿನ ದಿಗ್ಗೇವಾಡಿ,ಜಲಾಲಪುರ,ಚಿಂಚಲಿ, ಗುಂಡವಾಡ,ಶಿರಗೂರ,

ಸಿದ್ದಾಪುರ,ಕಾಗವಾಡ ತಾಲೂಕಿನ ಮುಳವಾಡ,ಕುಸನಾಳ,ಉಗಾರ ಬಿ.ಕೆ.ಐನಾಪುರ,ಕೃಷ್ಣಾ ಕಿತ್ತೂರ,ಬಣಜವಾಡ,ಅಥಣಿ ತಾಲೂಕಿನ ಸಪ್ತಸಾಗರ,ದರೂರ,ಮಹಿಷವಾಡಗಿ,ಶೇಗುಣಸಿ,ಖವಟಕೊಪ್ಪ ಮೊದಲಾದ 20 ಗ್ರಾಮಗಳು ಮತ್ತು ಅಥಣಿ ಪಟ್ಟಣ ತೀವ್ರ ಕುಡಿಯುವ ನೀರಿನ ಅಭಾವದಿಂದ ಬಳಲುತ್ತಿವೆ. ಈ ಪ್ರದೇಶಗಳಿಗೆ ರಾಜಾಪುರ ಆಣೆಕಟ್ಟೆಯ ನೀರು ತಲುಪಬೇಕಾದರೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ರೈತರು ತಮ್ಮ ಹೊಲಗಳಲ್ಲಿಯ ಪಂಪ್ ಸೆಟ್ ಗಳನ್ನು ಬಂದ್ ಮಾಡುವುದು ಅವಶ್ಯಕವಾಗಿದೆ.

     ಈ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಚಿಕ್ಕೋಡಿ ಭಾಗದ ರೈತರು ಈ ಸಂಬಂಧ ಸಹಕರಿಸಿದರೆ ಕಾಗವಾಡ,ರಾಯಬಾಗ ಮತ್ತು ಅಥಣಿ ತಾಲೂಕುಗಳ ಜನತೆಗೆ 3 ದಿನಗಳಲ್ಲಿ ನೀರು ಲಭ್ಯವಾಗಲಿದೆ.

         ಮಹಾರಾಷ್ಟ್ರದ ಕೊಯ್ನಾ ಅಥವಾ ವಾರ್ಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರ ಕಳೆದ ಮೂರು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಮಹಾರಾಷ್ಟ್ರ ಅದಕ್ಕೆ ಒಪ್ಪಿಲ್ಲ. ಉಭಯ ರಾಜ್ಯಗಳ ನಡುವೆ “ನೀರು ವಿನಿಮಯ ಒಪ್ಪಂದ” ಏರ್ಪಟ್ಟ ನಂತರವೇ ನೀರು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರ ಪಟ್ಟುಹಿಡಿದಿದೆ.

          ಇಂದು ರಾಜಾಪುರ ಆಣೆಕಟ್ಟೆಯಿಂದ ಅನಿವಾರ್ಯವಾಗಿ ನೀರು ಬಿಟ್ಟಂತೆ ಶೀಘ್ರದಲ್ಲಿಯೇ ಕೊಯ್ನಾ ಆಣೆಕಟ್ಟೆಯಿಂದಲೂ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಯಿದೆ. ಈ ರೀತಿ ಕರ್ನಾಟಕಕ್ಕೆ ತಿಳಿಸದೇ 2005ರಲ್ಲಿ ದಿಢೀರ್ ಆಗಿ 5 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಾಗ ಕೃಷ್ಣಾ ನದಿಗೆ ಭಾರೀ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದನ್ನು ನೆನಪು ಮಾಡಿಕೊಳ್ಳಬಹುದು.

Share Post

Leave a Reply

Your email address will not be published. Required fields are marked *

error: Content is protected !!