‘ವೋಟ್ ಅವರಿಗೆ, ಅಭಿವೃದ್ಧಿಗೆ ನಾವು ಬೇಕಾ..?” : ಮಂಡ್ಯ ಜನತೆಯ ಮೇಲೆ ದರ್ಪ ತೋರಿಸಿದ ಸಚಿವ ತಮ್ಮಣ್ಣ

ಮಂಡ್ಯ:ತಮ್ಮ ಪಕ್ಷಕ್ಕೆ ಮತ ಹಾಕದ ಗ್ರಾಮಸ್ಥರ ಎದುರು ರಾಜಕೀಯ ಎದುರಾಳಿಗಳ ಬಗ್ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಸಿದೆ. ಮದ್ದೂರು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಿ.ಸಿ.ತಮ್ಮಣ್ಣ ಅವರು ನಿನ್ನೆ ಮದ್ದೂರಮ್ಮ ಕೆರೆ ಆವರಣದಲ್ಲಿ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೆಲವು ದಲಿತ ಕಾಲೋನಿ ಗ್ರಾಮಸ್ಥರು ಮತ್ತು ಮಹಿಳೆಯರು ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಬಗ್ಗೆ ಸಚಿವರ ಗಮನ ಸೆಳೆಯಲು ಮುಂದಾದರು. ಈ ವೇಳೆ ಏಕಾಏಕಿ ಸಿಟ್ಟಾದ ಸಚಿವರು, ಅಭಿವೃದ್ಧಿಗೆ ನಾವು ಬೇಕು. ಮತ ಹಾಕುವುದು ಅವರಿಗಾ… ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಚಿಕೆಯಾಗುವುದಿಲ್ವಾ… ಬೆಣ್ಣೆಗಾರಿಕೆ ಮಾಡಲು ಬರ್ತಾರಿಲ್ಲಿ…ಯಜಮಾನಿಕೆ ಮಾಡಲು ಬರ್ತಾರೆ… ಎಂದು ಕಿಡಿಕಾರಿದ್ದಾರೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಿಸಿಕೊಟ್ಟೆ. ಆದರೆ ಯಾವುದನ್ನೂ ನೆನಪಿಸಿಕೊಳ್ಳುತ್ತಿಲ್ಲ.

ಅಭಿವೃದ್ಧಿ ವಿಷಯ ಬಂದಾಗ ನಮ್ಮ ಬಳಿ ಬರುತ್ತೀರಾ… ಮತ ಹಾಕುವಾಗ ಅವರನ್ನು ಬೆಂಬಲಿಸ್ತೀರಾ… ಜೋಡೆತ್ತುಗಳೇ ಬರುತ್ತವೆ, ಹತ್ತಿಸಿಕೊಳ್ಳಿ ಎಂದು ಹೇಳುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಈಗ ಎಲ್ಲಾ ಕಡೆ ಸಚಿವರು ಬಹಿರಂಗವಾಗಿಯೇ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!