ಗುರುವಾಯೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ

ಗುರುವಾಯೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳದ ಗುರುವಾಯೂರಿಗೆ ಭೇಟಿ ನೀಡಿ ವಿಶ್ವವಿಖ್ಯಾತ ಶ್ರೀಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಗುರುವಾಯೂರು ದೇವಸ್ಥಾನದಲ್ಲಿ ಒಂದು ಗಂಟೆ ಕಾಲ ಇದ್ದ ಮೋದಿ ಜಗದೋದ್ಧಾರಕ ಶ್ರೀಕೃಷ್ಣನಿಗೆ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ಕೆಲಕಾಲ ಅಲ್ಲೇ ಧ್ಯಾನಾಸಕ್ತರಾದರು. ದೇವಾಲಯದ ಪ್ರಧಾನ ಅರ್ಚಕರ ನೇತೃತ್ವ ಪುರೋಹಿತರ ತಂಡ ವಿಶೇಷ ಪೂಜೆಯಲ್ಲಿ ಮೋದಿ ಅವರಿಗೆ ನೆರವಾದರು.

ಇಂದು ಬೆಳಗ್ಗೆ 9.20ರಲ್ಲಿ ಕೊಚ್ಚಿಯ ನೌಕಾದಳದ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್‍ನಲ್ಲಿ ತೆರಳಿದ ಮೋದಿ ಬೆಳಗ್ಗೆ 9.50ರಲ್ಲಿ ಗುರುವಾಯೂರಿನ ಶ್ರೀ ಕೃಷ್ಣ ಕಾಲೇಜು ಮೈದಾನದಲ್ಲಿ ಇಳಿದು ನಂತರ ಭಾರೀ ಭದ್ರತೆ ನಡುವೆ ದೇಗುಲಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದರು.

ಬಳಿಕ ಅವರು ಗುರುವಾಯೂರಿನಲ್ಲಿ ರಾಜ್ಯ ಬಿಜೆಪಿ ಘಟಕ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಜನತೆಗೆ ಧನ್ಯವಾದ ಸಮರ್ಪಿಸಿದರು. ಸತತ ಎರಡನೆ ಬಾರಿ ಪ್ರಧಾನಿಯಾದ ನಂತರ ಮೋದಿ ಪಾಲ್ಗೊಂಡ ಪ್ರಥಮ ಸಾರ್ವಜನಿಕ ಸಭೆ ಇದಾಗಿದೆ.

ಪ್ರಧಾನಿ ಅವರು ನಿನ್ನೆ ತಡರಾತ್ರಿ ಕೊಚ್ಚಿಗೆ ಆಗಮಿಸಿದ್ದರು. ಕೇರಳ ರಾಜ್ಯಪಾಲ ಪಿ.ಸದಾಶಿವಂ, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್, ರಾಜ್ಯ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮೋದಿ ಅವರನ್ನು ಸ್ವಾಗತಿಸಿದರು.

ಬಳಿಕ ಅವರು ಕೊಚ್ಚಿಯ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾಯೂರು ಶ್ರೀ ಕೃಷ್ಣನ ದರ್ಶನ ಪಡೆದ ನಂತರ ಮೋದಿ ಇಂದು ದ್ವೀಪರಾಷ್ಟ್ರ ಮಾಲ್ಡೀವ್ಸ್‍ಗೆ ತೆರಳಿದ್ದಾರೆ. ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.

Share Post

Leave a Reply

error: Content is protected !!