ಸಚಿವ ಸಂಪುಟ ವಿಸ್ತರಣೆಯಾದರೆ ಕೇವಲ ಇಬ್ಬರಿಗೆ ಮಾತ್ರ ಅವಕಾಶ – ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆಯಾದರೆ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಹೀಗಾಗಿ ಪುನರ್ ರಚನೆಯೇ ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ರಾಮಲಿಂಗಾರೆಡ್ಡಿ, ವಿ. ಬಯ್ಯಾಪುರ ಅವರು ಪಕ್ಷದಲ್ಲಿ ಶಿಸ್ತಿನಿಂದ ಇದ್ದಾರೆ.

ರಾಮಲಿಂಗಾ ರೆಡ್ಡಿ ಅವರ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ಪಕ್ಷದ ಸಂಯೋಜನ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ರೋಷನ್ ಬೇಗ್ ಅವರು ಪದೇ ಪದೇ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಂತ್ರಿ ಸ್ಥಾನ ಮಾರಾಟವಾಗಿದೆ ಎಂದಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಬಫೂನ್ ಎಂದು ಹಗುರವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ಸಂಪೂರ್ಣ ವರದಿಯನ್ನು ನಾನು ಹೈಕಮಾಂಡ್‍ಗೆ ಕಳುಹಿಸಿಕೊಡುತ್ತೇನೆ. ಕ್ರಮ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

ಸಂಪುಟ ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಇತ್ತೀಚೆಗೆ ವೇಣುಗೋಪಾಲ್ ಅವರು ನಗರಕ್ಕೆ ಬಂದಿದ್ದಾಗ ಹಿರಿಯರ ಜೊತೆ ಸಭೆ ನಡೆಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಯಾರನ್ನೂ ಕಡೆಗಣಿಸಲಾಗಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಯಾರೊಬ್ಬರ ಆಸ್ತಿಯೂ ಅಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಎಲ್ಲರ ಅಭಿಪ್ರಾಯಗಳನ್ನು ಕೇಳಿ ನಂತರವೇ ಬಿ ಫಾರಂ ಕೊಡಲಾಗಿದೆ ಎಂದು ಹೇಳಿದರು.

ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಯಿಂದ ಹಿನ್ನಡೆಯಾಗಿದೆ ಎಂದು ಸುಮಲತಾ ಸೇರಿದಂತೆ ಕೆಲವರು ಹೇಳುತ್ತಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ 10ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಬಹುದಿತ್ತು ಎಂದು ಹೇಳಿರುವುದು ಸುಮಲತಾ ಅವರ ವೈಯಕ್ತಿಕ ಅಭಿಪ್ರಾಯ. ಆ ಬಗ್ಗೆ ಪ್ರತಿಕ್ರಿಯಿಸಿದರೆ ಮಾಧ್ಯಮಗಳು ಬೇರೆ ಬೇರೆ ರೀತಿ ಅರ್ಥೈಸಿಕೊಳ್ಳುತ್ತವೆ.

ಅಂತಹ ಪರಿಸ್ಥಿತಿಯ ಲಾಭ ಪಡೆಯಲು ನಾನು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದರು. ಲೋಕಸಭೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದರ ಕಾರಣಗಳನ್ನು ಪತ್ತೆಹಚ್ಚಲು ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ.

ಸಮಿತಿಯ ವರದಿ ಆಧರಿಸಿ ನಂತರ ಹೈಕಮಾಂಡ್‍ಗೆ ಮಾಹಿತಿ ನೀಡುತ್ತೇವೆ. ಸೋಲಿನ ಪರಾಮರ್ಶೆ ನಡೆಸುತ್ತೇವೆ ಎಂದು ಅವರು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ನೀಡಿರುವ ರಾಜೀನಾಮೆ ಬಗ್ಗೆ ಆ ಪಕ್ಷದ ನಾಯಕರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಿತ್ರ ಪಕ್ಷದ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Share Post

Leave a Reply

error: Content is protected !!