ತಿರುಪತಿ ತಿಮ್ಮಪ್ಪ ದೇಗುಲಕ್ಕೆ ನಟ ಮೋಹನ್ ಬಾಬು ಬಾಸ್..? ನಿಜವೇ..!

ಜಗದೇಕ ಒಡೆಯ, ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿರುಮಲದ ಉಸ್ತುವಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ನಡುವೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಬೋರ್ಡ್ ನ ಮುಖ್ಯಸ್ಥ ಸ್ಥಾನಕ್ಕೆ ನಟ ಮೋಹನ್ ಬಾಬು ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿದೆ.

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಂಬಂಧಿಕರಾದ ಮೋಹನ್ ಬಾಬು ಅವರಿಗೆ ಈ ಪ್ರತಿಷ್ಠಿತ ಹುದ್ದೆ ಸುಲಭವಾಗಿ ದಕ್ಕಲಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರವನ್ನು ಜಗನ್ ರೆಡ್ಡಿ ಪ್ರಕಟಿಸಿಲ್ಲ, ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳನ್ನು ಬದಲಾಯಿಸಿದ್ದು, ಸದ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ವೈಎಸ್ ಜಗನ್ ಅವರ ಕಸಿನ್ ವಿರಾನಿಕಾ ಅವರನ್ನು ಮೋಹನ್ ಬಾಬು ಅವರ ಪುತ್ರ ವಿಷ್ಣು ಮಂಚು ವರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವೈಎಸ್ ಜಗನ್ ರೆಡ್ಡಿ ಪರ ಪ್ರಚಾರ ಕೈಗೊಂಡಿದ್ದ ಮೋಹನ್ ಬಾಬು ಅವರು, ಎನ್ ಚಂದ್ರಬಾಬು ನಾಯ್ಡು ವಿರುದ್ಧ ವಾಕ್ಸಮರ ನಡೆಸಿದ್ದರು.

ಟಿಟಿಡಿ ಹುದ್ದೆ ಸಿಗಲಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್ ಬಾಬು, ‘ನನಗೂ ಈ ಬಗ್ಗೆ ತಿಳಿದು ಬಂದಿದೆ. ಅನೇಕ ಮಂದಿ ಕರೆ ಮಾಡಿ ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ. ನನ್ನ ಆಸೆ ಜಗನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡುವುದು ಮಾತ್ರ ಆಗಿತ್ತು. ಇದಕ್ಕಾಗಿ ಶ್ರಮಿಸಿದ್ದೇನೆ, ಆದರೆ, ಇದರ ಪ್ರತಿಫಲವಾಗಿ ಯಾವುದೇ ಹುದ್ದೆಯನ್ನು ಅಪೇಕ್ಷಿಸಿಲ್ಲ, ಯಾವ ಹುದ್ದೆಗಾಗಿ ಲಾಬಿ ನಡೆಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!